ADVERTISEMENT

ಬೀದರ್‌: ಈಶ್ವರ ರಾಜೀನಾಮೆಗೆ ಭಗವಂತ ಆಗ್ರಹ

ಮನೆ ಹಂಚಿಕೆಯಲ್ಲಿ ಭಾರಿ ಅವ್ಯವಹಾರದ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮೇ 2020, 14:19 IST
Last Updated 9 ಮೇ 2020, 14:19 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ‘ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಯೋಜನೆಗಳ ಮನೆ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ಬಹಿರಂಗವಾಗಿದ್ದು, ಈಶ್ವರ ಖಂಡ್ರೆ ಅವರು ನೈತಿಕ ಹೊಣೆ ಹೊತ್ತು ಶಾಸಕ ಹುದ್ದೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದರು.

‘ಈಶ್ವರ ಖಂಡ್ರೆ ಅವರು ರಾಜೀನಾಮೆ ಕೊಡದಿದ್ದರೆ ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಸದನದಲ್ಲಿ ಸಚಿವ ಪ್ರಭು ಚವಾಣ್ ಹಾಗೂ ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ಅವರು ಈಶ್ವರ ಖಂಡ್ರೆ ವಿರುದ್ಧ ಧ್ವನಿ ಎತ್ತಲಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿ ಸಂಘರ್ಷಕ್ಕೆ ಇಳಿಯುವ ಮೊದಲೇ ಈಶ್ವರ ಖಂಡ್ರೆ ಅವರು ರಾಜೀನಾಮೆ ಕೊಟ್ಟು ಭಾಲ್ಕಿ ತಾಲ್ಲೂಕಿನ ಜನರ ಸಾಮಾಜಿಕ ಬದುಕನ್ನು ಹಸನುಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘2018ರ ಚುನಾವಣೆಯ ಮೊದಲು ಈಶ್ವರ ಖಂಡ್ರೆ ಅವರು ಅಧಿಕಾರದ ದುರುಪಯೋಗ ಮಾಡಿಕೊಂಡು 26 ಸಾವಿರ ಮನೆಗಳ ಹಂಚಿಕೆ ಮಾಡಿದ್ದಾರೆ. ಇದರಲ್ಲಿ ನಕಲಿ ಫಲಾನುಭವಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. 2019ರಲ್ಲಿ ಈಶ್ವರ ಖಂಡ್ರೆ ಬಣ್ಣ ಬಯಲು ಮಾಡಿದ್ದಕ್ಕೆ ನಾನು ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಸತಿ ಸಚಿವ ಸೋಮಣ್ಣ ಅವರು ಭಾಲ್ಕಿಗೆ ಬಂದು ಸಂಬಂಧಪಟ್ಟವರಿಂದ ಮಾಹಿತಿ ಪಡೆದ ನಂತರ ಪ್ರಕರಣದ ತನಖೆಗೆ ಆದೇಶ ನೀಡಿದ್ದರು. ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ತನಿಖಾ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದರು. 2019ರ ಡಿಸೆಂಬರ್ 30ರಂದು ಈಶ್ವರ ಖಂಡ್ರೆ ಅವರು ಭಾಲ್ಕಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಣೆ ಮಾಡಿ ಸಾಚಾತನ ಪ್ರದರ್ಶಿಸಲು ಯತ್ನಿಸಿದ್ದರು’ ಎಂದು ಟೀಕಿಸಿದರು.

‘ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕರು ಜನವರಿ 11ರಿಂದ 28ರ ವರೆಗೆ ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ. ಫಲಾನುಭವಿಗಳ ಮನೆಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. 17 ಸಾವಿರ ಮನೆಗಳ ಪೈಕಿ 9,710 ಮನೆಗಳ ಹಂಚಿಕೆಗೆ ಬೋಗಸ್‌ ಫಲಾನುಭವಿಗಳ ಆಯ್ಕೆ ಮಾಡಿ ಸರ್ಕಾರಕ್ಕೆ ₹ 91 ಕೋಟಿ ನಷ್ಟ ಉಂಟು ಮಾಡಲಾಗಿದೆ. ಈ ಹಣವನ್ನು ಖಂಡ್ರೆ ಅವರೇ ಭರಿಸಬೇಕು’ ಎಂದು ಒತ್ತಾಯಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಳಿಗೆ ತೂರಿ ಖಂಡ್ರೆ ಅವರು ತಮ್ಮ ಮನೆಯಲ್ಲಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಮನೆಗಳ ಹಂಚಿಕೆ ಮಾಡಿ ಅಧಿಕಾರದ ದರ್ಪ ತೋರಿಸಿದ್ದಾರೆ. ಪಿಡಿಒಗಳ ಮೇಲೆ ಒತ್ತಡ ಹಾಕಿದ್ದಾರೆ. ಈ ಪ್ರಕರಣದಲ್ಲಿ ಭಾಲ್ಕಿ ಪುರಸಭೆಯ ಮುಖ್ಯಾಧಿಕಾರಿ ಸೇರಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇನ್ನುಳಿದ ಅಧಿಕಾರಿಗಳು ತೊಂದರೆಗೆ ಸಿಲುಕಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.