ADVERTISEMENT

ಕಮಲನಗರ: ಸ್ವಚ್ಛತೆ ಹೆಸರಲ್ಲಿ ಹಣ ದುರುಪಯೋಗ ಆರೋಪ

ಗ್ರಾ.ಪಂ ಅಧ್ಯಕ್ಷೆ, ಪಿಡಿಒಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 5:02 IST
Last Updated 21 ಜೂನ್ 2021, 5:02 IST
ಕಮಲನಗರ ತಾಲ್ಲೂಕಿನ ತೋರಣಾ ಗ್ರಾಮ ಪಂಚಾಯಿತಿ ಸಮೀಪದ ನೀರಿನ ಟ್ಯಾಂಕ್ ಬಳಿಯ ಗೋಕಟ್ಟೆ ನೀರು ಪಾಚಿಗಟ್ಟಿರುವುದು
ಕಮಲನಗರ ತಾಲ್ಲೂಕಿನ ತೋರಣಾ ಗ್ರಾಮ ಪಂಚಾಯಿತಿ ಸಮೀಪದ ನೀರಿನ ಟ್ಯಾಂಕ್ ಬಳಿಯ ಗೋಕಟ್ಟೆ ನೀರು ಪಾಚಿಗಟ್ಟಿರುವುದು   

ಕಮಲನಗರ: ‘ತಾಲ್ಲೂಕಿನ ತೋರಣಾ ಗ್ರಾಮದ ಹಿಂದುಳಿದ ಬಡಾವಣೆ ವಾರ್ಡ್ ಸಂಖ್ಯೆ 3ರಲ್ಲಿ ಚರಂಡಿ ಸ್ವಚ್ಛಗೊಳಿಸದೇ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಪಿಡಿಒ ಅವರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈಚೆಗೆ ಬಡಾವಣೆಗೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಹುಬಾಯಿ ದೇವಿದಾಸ ಹಾಗೂ ಪಿಡಿಒ ಪ್ರಭುದಾಸ ಜಾಧವ ಅವರಿಗೆ ಜನರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘ಕೊರೊನಾ ನಿಯಂತ್ರಣಕ್ಕೆ ವಿವಿಧ ಯೋಜನೆಗಳಡಿ ಹಣ ಬಿಡುಗಡೆಯಾದರೂ ಉದ್ದೇಶಿತ ಕಾರ್ಯ ಆಗಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಊರಿನ ಹಲವು ರಸ್ತೆಗಳಲ್ಲಿ, ಕುಡಿಯುವ ನೀರಿನ ಟ್ಯಾಂಕ್, ಗೋ ಕಟ್ಟೆ ಸ್ವಚ್ಛತೆ ಕಾರ್ಯ ಕೈಗೊಂಡಿಲ್ಲ. ಕೆಲವು ಚರಂಡಿಗಲ್ಲಿ ಕೊಳಚೆ ನೀರು ಸಂಗ್ರಹಗೊಂಡು ದುರ್ವಾಸನೆ ಹರಡುತ್ತಿದೆ. ಸ್ಯಾನಿಟೈಸರ್ ಸಿಂಪರಣೆ ಮಾಡದ ಕಾರಣ ಸೊಳ್ಳೆ ಕಾಟ ಮೀತಿ ಮೀರಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲಕಳೆಯುವಂತಾಗಿದೆ’ ಎಂದು ಆತಂಕ ಹೊರಹಾಕಿದರು.

‘ಮುಂಬರುವ ದಿನಗಳಲ್ಲಿ ಗ್ರಾ.ಪಂ ವ್ಯಾಪ್ತಿಯ ಮುಧೋಳ(ಕೆ), ತೋರಣಾ, ತೋರಣಾವಾಡಿ ಈ ಮೂರು ಗ್ರಾಮಗಲ್ಲಿನ ಎಲ್ಲ ಚರಂಡಿಗಳು ಮೊದಲು ಸ್ವಚ್ಛಗೊಳಿಸಬೇಕು. ವಿಳಂಬ ನೀತಿ ಅನುಸರಿಸಿದ್ದಲ್ಲಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಕುಶಾಲ ಸಿಂಧೆ, ಪ್ರಜ್ಞಾವಂತ ಕಾಂಬಳೆ, ಬಾಲಾಜಿ, ಕಿಶನ ಸಿಂಧೆ, ಪ್ರಶಾಂತ ಕಾಂಬಳೆ, ದೀಪಕ ಡೊಂಗರೆ, ಪ್ರಕಾಶ ಮಾಡೆ, ಬಾಲಾಜಿ ಡೊಂಗರೆ ಎಚ್ಚರಿಸಿದರು.

ಪಿಡಿಒ ಅವರ ಭರವಸೆ ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.