ಬೀದರ್: ಜಿಲ್ಲೆಯ ಪ್ರತಿ ಪಂಚಾಯಿತಿಗೆ ಮಂಜೂರಾಗಿರುವ 20 ಮನೆಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಸಂಸದ ಭಗವಂತ ಖೂಬಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯಬಾರದು. ಪಂಚಾಯಿತಿಯಲ್ಲಿ ತಪ್ಪುಗಳು ನಡೆದರೆ ತಾಲ್ಲೂಕುಮಟ್ಟದ ಅಧಿಕಾರಿಗಳು ಸರಿಪಡಿಸಬೇಕು. ಬಡವರ ಮನೆಗಳು ಶ್ರೀಮಂತರು ಅಥವಾ ಈಗಾಗಲೇ ಯೋಜನೆ ಲಾಭ ಪಡೆದವರ ಪಾಲಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರದ ಯಾವುದೇ ಪಂಚಾಯಿತಿಯಲ್ಲಿ ಅವ್ಯವಹಾರ ಅಥವಾ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿರುವ ಕುರಿತು ಯಾರಾದರೂ ದೂರಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕಾಗಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
2022 ರ ವೇಳೆಗೆ ದೇಶದ ಪ್ರತಿಯೊಬ್ಬರೂ ಸೂರು ಹೊಂದಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಗೊಳಿಸಿದ್ದಾರೆ. ಪ್ರಸಕ್ತ ವರ್ಷ ರಾಜ್ಯಕ್ಕೆ 1.56 ಲಕ್ಷ ಮನೆಗಳು ಮಂಜೂರಾಗಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.