ADVERTISEMENT

ಬೀದರ್: ಸಂವಿಧಾನ ಶಿಲ್ಪಿಗೆ ಅಭಿಮಾನದ ನಮನ

ಸಾಮಾಜಿಕ ಅಂತರ ಕಾಯ್ದುಕೊಂಡು ಡಾ.ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 13:28 IST
Last Updated 14 ಏಪ್ರಿಲ್ 2020, 13:28 IST
ಬೀದರ್‌ನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಮಂಗಳವಾರ ಸಾಮಾಜಿಕ ಅಂತರ ಕಾಯ್ದುಕೊಂಡು ಬಾಬಾಸಾಹೇಬರಿಗೆ ಗೌರವ ನಮನ ಸಲ್ಲಿಸಿದರು
ಬೀದರ್‌ನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಮಂಗಳವಾರ ಸಾಮಾಜಿಕ ಅಂತರ ಕಾಯ್ದುಕೊಂಡು ಬಾಬಾಸಾಹೇಬರಿಗೆ ಗೌರವ ನಮನ ಸಲ್ಲಿಸಿದರು   

ಬೀದರ್‌: ಏ. 14 ದಲಿತ ಸೂರ್ಯ ಅವತರಿಸಿದ ದಿನ. ನಗರದ ಜನ ಸೂರ್ಯೋದಯದ ವೇಳೆಗೆ ಮೇಣದ ಬತ್ತಿ ಹಿಡಿದು ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಬಳಿ ಬಂದು ಸಾಮೂಹಿಕವಾಗಿ ನಮನ ಸಲ್ಲಿಸುತ್ತಿದ್ದರು. ಈ ಬಾರಿ ಸರ್ಕಾರ ಲಾಕ್‌ಡೌನ್‌ ಘೋಷಿಸಿರುವ ಕಾರಣ ವಿವಿಧ ಸಂಘಟನೆಗಳ ಮುಖಂಡರು ಮಾತ್ರ ಇಲ್ಲಿಯ ಡಾ.ಅಂಬೇಡ್ಕರ್ ವೃತ್ತಕ್ಕೆ ಬಂದು ಪುಷ್ಪಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.

ನಗರಸಭೆ ಸಿಬ್ಬಂದಿ ಸೋಮವಾರ ರಾತ್ರಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ವೃತ್ತಾಕಾರದಲ್ಲಿ ಮಾರ್ಕ್‌ಗಳನ್ನು ಮಾಡಿದ್ದರು. ದಲಿತ ಸಂಘಟನೆಗಳ ಮುಖಂಡರೆಲ್ಲರೂ ಅದರೊಳಗೆ ನಿಂತು ಗೌರವ ನಮನ ಸಲ್ಲಿಸಿ ಡಾ.ಅಂಬೇಡ್ಕರ್‌ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಿ ಮನೆಗಳಿಗೆ ತೆರಳಿದರು.

ನಗರದಲ್ಲಿ ಒಂದೇ ಒಂದು ಹೂವಿನ ಅಂಗಡಿ ತೆರೆದುಕೊಂಡಿರಲಿಲ್ಲ. ಆದರೆ ಅಂಬೇಡ್ಕರ್‌ ಅಭಿಮಾನಿಗಳು ಮುಂಚಿತವಾಗಿಯೇ ರೈತರ ಹೊಲಗಳಿಂದ ಹೂವುಗಳನ್ನು ತರಿಸಿ ಇಟ್ಟುಕೊಂಡಿದ್ದರು. ಕೆಲವರು ಮನೆಗಳಲ್ಲಿ ಬಾಬಾಸಾಹೇಬರ ಚಿತ್ರಗಳಿಗೆ ಹೂಮಾಲೆ ಹಾಕಿದರೆ, ಇನ್ನು ಕೆಲವರು ಅಂಬೇಡ್ಕರ್‌ ವೃತ್ತದ ವರೆಗೂ ಬಂದು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ADVERTISEMENT

ದಲಿತ ಮುಖಂಡರಾದ ಮಾರುತಿ ಬೌದ್ಧೆ, ಅನಿಲ ಬೆಲ್ದಾರ್, ಕಲ್ಯಾಣರಾವ್‌ ಭೋಸಲೆ, ರಾಜ್ಯ ಜಾನಪದ ಅಕಾಡೆಮಿ ಮಾಜಿ ಸದಸ್ಯ ವಿಜಯಕುಮಾರ ಸೋನಾರೆ, ನಾಗೇಂದ್ರ ದಂಡೆ, ಬಸವರಾಜ ಮಾಳಗೆ, ಮಹೇಶ ಗೊರನಾಳಕರ್, ಶ್ರೀಪತಿ ದೀನೆ, ಸಾಹಿತಿ ಸುಬ್ಬಣ್ಣ ಕರಕನಳ್ಳಿ ಪಾಲ್ಗೊಂಡಿದ್ದರು.

ಸಚಿವರಿಂದ ಪ್ರತಿಮೆಗೆ ಮಾಲಾರ್ಪಣೆ:ಡಾ.ಅಂಬೇಡ್ಕರ್‌ ಜಯಂತಿ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗೂ ಸಂಸದ ಭಗವಂತ ಖೂಬಾ ಅವರು ಡಾ.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಶಾಸಕ ಬಂಡೆಪ್ಪ ಕಾಶೆಂಪೂರ್, ಬೀದರ್‌ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮುಲು, ಎಂಎಸ್‍ಐಎಲ್ ನಿರ್ದೇಶಕ ಬಾಬು ವಾಲಿ, ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಗೋವಿಂದ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಇದ್ದರು.

ಲಾಕ್‌ಡೌನ್‌ ಪ್ರಯುಕ್ತ ಡಾ.ಅಂಬೇಡ್ಕರ್‌ ವೃತ್ತ, ಸಿದ್ಧಾರ್ಥ ಕಾಲೇಜು ಸಮೀಪದ ವೃತ್ತ ಹಾಗೂ ನಯಾಕಮಾನ್‌ ಸಮೀಪ ಜಿಲ್ಲಾ ಸಶಸ್ತ್ರಪಡೆಯ ಸಿಬ್ಬಂದಿ ಹಾಗೂ ಸಿವಿಲ್‌ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಕಾಂಗ್ರೆಸ್ ಕಚೇರಿಯಲ್ಲಿ ಜಯಂತಿ: ಇಲ್ಲಿಯ ಶಿವನಗರದಲ್ಲಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ಬಡ ಕುಟುಂಬದಲ್ಲಿ ಜನಿಸಿದ ಅಂಬೇಡ್ಕರ್ ಅವರು ಪರಿಶ್ರಮಪಟ್ಟು ವಿದ್ಯೆ ಸಂಪಾದಿಸಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದರು. ಈ ಮೂಲಕ ಬಡತನ ಸಾಧನೆಗೆ ಅಡ್ಡಿಯಾಗದು ಎನ್ನುವುದನ್ನು ತೋರಿಸಿಕೊಟ್ಟಿದ್ದರು ಎಂದು ಅವರು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಆನಂದ ದೇವಪ್ಪ, ಮುಖಂಡರಾದ ಶಂಕರರರಾವ್ ದೊಡ್ಡಿ, ಶಿವರಾಜ ಹಾಸನಕರ್, ರೋಹಿದಾಸ ಘೋಡೆ, ಸಂಜು ಡಿ.ಕೆ, ವೆನಿಲಾ ಸೂರ್ಯವಂಶಿ, ಭೋಜಪ್ಪ ಮೆಟಗೆ, ವಿನೋದ ಅಪ್ಪೆ ಭಾಗವಹಿಸಿದ್ದರು.

ಕೋವಿಡ್ 19 ಸೋಂಕಿನ ಕಾರಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಸಾಮಾಜಿಕ ಅಂತರ ಕಾಯ್ದುಕೊಂಡರು.

ಕರ್ನಾಟಕ ಕಾಲೇಜ್‌:ನಗರದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ‌.ಬಸವರಾಜ ಬಲ್ಲೂರ ಪೂಜೆ ನೆರವೇರಿಸಿದರು. ಶಿವಶಂಕರ ಸ್ವಾಮಿ, ಸುಭಾಷ ಮೊದಲಾದವರು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಡವರಿಗೆ ಆಹಾರ ಧಾನ್ಯ ವಿತರಣೆ:ಅಂಬೇಡ್ಕರ್ ಜಯಂತಿ ಪ್ರಯುಕ್ತ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅಭಿಮಾನಿ ಬಳಗದ ವತಿಯಿಂದ ಝೀರಾ ಮಿನರಲ್ ವಾಟರ್‌ ಮಾಲೀಕ ಆಕಾಶ ಪಾಟೀಲ ನೇತೃತ್ವದಲ್ಲಿ ಬಡವರಿಗೆ ಆಹಾರ ಧಾನ್ಯ ವಿತರಿಸಲಾಯಿತು.

ತಮ್ಮಣ ಹಾರೂರಗೇರಿ, ಬಸವರಾಜ ಅಲ್ಲಾಪೂರ, ಸಂತೋಷ ಅಪ್ಪೆ, ನಿತಿನ್ ಕುಮಾರ ಹೊಸಮನಿ, ಜೈಕುಮಾರ ಹಾವೆ, ಸಂದೀಪ ಕೆಂಚೆ, ವಿಶಾಲ ಕುದರೆ ಇದ್ದರು.

ಮಾಸ್ಕ್‌ ವಿತರಣೆ:ಬಿಜೆಪಿ ಬೀದರ್‌ ನಗರ ಘಟಕದ ವತಿಯಿಂದ ಗಾಂಧಿ ಗಂಜ್‌ನ ಎಪಿಎಂಸಿ ಆವರಣದಲ್ಲಿ ಹಸುಗಳಿಗೆ ಮೇವು ಹಾಗೂ ಹಮಾಲರಿಗೆ ಮಾಸ್ಕ್ ವಿತರಿಸಲಾಯಿತು.

ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಎಂಎಸ್‍ಐಎಲ್ ನಿರ್ದೇಶಕ ಬಾಬು ವಾಲಿ, ಬಿಜೆಪಿ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್, ನಗರ ಘಟಕ ಅಧ್ಯಕ್ಷ ಹಣಮಂತ ಬುಳ್ಳಾ, ಎಪಿಎಂಸಿ ಅಧ್ಯಕ್ಷ ಅನಿಲ್ ಪನ್ನಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣೆ, ಶೈಲೇಂದ್ರ ಬೆಲ್ದಾಳೆ, ಸುನೀಲ ಗೌಳಿ, ಅನಿಲ ರಾಜಗಿರಾ, ಬಾಬುರಾವ್ ಕಾರಬಾರಿ, ಶಶಿ ಹೊಸಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.