ADVERTISEMENT

ಮಾನವೀಯ ಮೌಲ್ಯದ ಪ್ರತಿಪಾದಕ ಬಸವಣ್ಣ: ಬಿ.ಎಸ್.ಯಡಿಯೂರಪ್ಪ

ಅನುಭವ ಮಂಟಪ ಉತ್ಸವದ ನೇರ ಪ್ರಸಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 1:36 IST
Last Updated 30 ನವೆಂಬರ್ 2020, 1:36 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ 41ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆನ್‌ಲೈನ್ ಮೂಲಕ ಸಂದೇಶ ನೀಡಿದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ 41ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆನ್‌ಲೈನ್ ಮೂಲಕ ಸಂದೇಶ ನೀಡಿದರು   

ಬಸವಕಲ್ಯಾಣ: ‘ಮಹಾತ್ಮ ಬಸವೇಶ್ವರರು ಮಾನವೀಯ ಮೌಲ್ಯದ ಪ್ರತಿಪಾದಕರು. ಅವರ ಸಂದೇಶದ ಪಾಲನೆಯಾದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಲ್ಲಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯಿಂದ ಆಯೋಜಿಸಿದ್ದ 41 ನೇ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟದ ಸಮಾರೋಪದಲ್ಲಿ ಭಾನುವಾರ ಅವರು ಫೆಸ್‌ಬುಕ್, ಯುಟ್ಯೂಬ್ ನೇರಪ್ರಸಾರದಲ್ಲಿ ಮಾತನಾಡಿದರು.

‘ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಸಕಲ ಶರಣರನ್ನು ಒಗ್ಗೂಡಿಸಿ ನಡೆ ನುಡಿ ಒಂದಾಗಿಸಿ ಬಾಳುವುದನ್ನು ಕಲಿಸಿದರು. ವಚನ ಸಾಹಿತ್ಯ ರಚಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ದರು. 20ನೇ ಶತಮಾನದಲ್ಲಿ ಭಾಲ್ಕಿಯ ಲಿಂ.ಚನ್ನಬಸವ ಪಟ್ಟದ್ದೇವರು ನೂತನ ಅನುಭವ ಮಂಟಪ ಕಟ್ಟಿದರು. ಅವರ ನಂತರ ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಅವರ ಕಾರ್ಯವನ್ನು ಮುಂದುವರೆಸಿಕೊಂಡು ಶರಣರ ವಚನ ಸಾರ ಲೋಕಕ್ಕೆ ಉಣಬಡಿಸುತ್ತಿದ್ದಾರೆ’ ಎಂದರು.

ADVERTISEMENT

ನೇರ ಪ್ರಸಾರದ ಮೂಲಕ ಸಮಾರೋಪ ಭಾಷಣ ಮಾಡಿದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಇಂದು ಬಸವಣ್ಣನವರ ವಿಚಾರಗಳಿಗೆ ಕತ್ತಲೆ ಕವಿಯುತ್ತಿದ್ದು, ಇದರಿಂದ ಅವರನ್ನು ರಕ್ಷಿಸಿಕೊಳ್ಳಬೇಕಿದೆ. ಕೆಲವರು ಜಾತಿ ಆಧಾರದಲ್ಲಿ ಸಮಾಜ ಒಡೆಯುವ ಹುನ್ನಾರ ನಡೆಸಿದ್ದಾರೆ. ಇದರಿಂದ ಶೋಷಿತ ವರ್ಗದವರಿಗೆ ಅನ್ಯಾಯ ಆಗುತ್ತಿದೆ’ ಎಂದರು.

‘ಬುದ್ಧ ಸಮಾನತೆ ಸಾರಿದ ಮೊದಲಿಗರು. ನಂತರ ಬಸವಣ್ಣನವರು ಇದಕ್ಕಾಗಿ ಪ್ರಯತ್ನಿಸಿದರು. ಡಾ.ಅಂಬೇಡ್ಕರ್ ಅವರು ಅನೇಕ ಸಂವಿಧಾನಗಳನ್ನು ಓದಿ ಭಾರತೀಯ ಸಂವಿಧಾನ ಬರೆದು ಸಮಾನತೆಗಾಗಿ ಶ್ರಮಿಸಿದ ಎಲ್ಲ ಮಹಾತ್ಮರ ಸಂದೇಶಗಳನ್ನು ಅದರಲ್ಲಿ ಅಡಕಗೊಳಿಸಿದರು. ಬಸವಾದಿ ಶರಣರು ಅಸಮಾನತೆ ವಿರುದ್ಧ ಚಳವಳಿ ನಡೆಸಿದರು. ಮೌಢ್ಯದಿಂದ ಕೂಡಿದ ವೈದಿಕ ಸಂಸ್ಕೃತಿಯನ್ನು ವಿರೋಧಿಸಿದರು. ಬುದ್ಧ ಅತ್ತ ದೀಪಭವ ಎಂದು ಸಾರಿದರೆ, ಬಸವಣ್ಣ ನಿನಗೆ ನೀನೆ ಗುರು ಎಂದು ಸಾರಿ ಮನುಷ್ಯನಿಗೆ ಮಹತ್ವ ತಂದುಕೊಟ್ಟರು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, `ಸಂವಿಧಾನದಲ್ಲಿ ಸಮಾನತೆ ಇದ್ದರೂ ಸಮಾಜದಲ್ಲಿ ಜಾತೀಯತೆ ಇದೆ. ಆದ್ದರಿಂದ ಸಮಾಜ ಸುಧಾರಣೆಗೆ ಒಬ್ಬ ಬಸವಣ್ಣ ಅಲ್ಲ; ನೂರಾರು ಬಸವಣ್ಣ ಬೇಕು. ಪ್ರಧಾನಿ ಮೋದಿಯವರ ಆತ್ಮನಿರ್ಭರ ರಾಷ್ಟ್ರದ ಸಂದೇಶ ಬಸವಣ್ಣನವರ ಸ್ವಾವಲಂಬಿ ಬದುಕಿನ ತತ್ವದ ಪ್ರತಿರೂಪವೇ ಆಗಿದೆ’ ಎಂದರು.

ಭಾಲ್ಕಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘40 ವರ್ಷಗಳಿಂದ ಶರಣ ಕಮ್ಮಟ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಸಂಭ್ರಮದಿಂದ ನೆರವೇರುತ್ತಿತ್ತು. ಕೋವಿಡ್ ಕಾರಣ ನೇರಪ್ರಸಾರದ ಮೂಲಕ ಹಮ್ಮಿಕೊಳ್ಳಲಾಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ತೆಲಂಗಾಣ ಸಚಿವ ಹರೀಶ ರಾವ್, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ್, ಭಾರತೀಯ ಬಸವ ದಳದ ಅಧ್ಯಕ್ಷ ಬಾಬು ವಾಲಿ ಮಾತನಾಡಿದರು. ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಉಪಸ್ಥಿತರಿದ್ದರು.

ಬಸವತತ್ವದಂತೆ ವಿವಾಹ: ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಗಡ್ಡೆ ಹಾಗೂ ಗುರುನಾಥ ಗಡ್ಡೆ ಅವರ ಪುತ್ರಿ ಸತ್ಯಕ್ಕ ಹಾಗೂ ಚನ್ನವೀರ ಕರಸೆ ಅವರ ವಿವಾಹ ಶರಣ ಕಮ್ಮಟ ಉತ್ಸವದ ವೇದಿಕೆಯಲ್ಲಿ ಬಸವತತ್ವದಂತೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.