ADVERTISEMENT

ಪ್ರತಿ ಜಿಲ್ಲೆಯಲ್ಲಿ ಕನ್ನಡದ ಕಹಳೆ ಮೊಳಗಲಿ

ಜಿಲ್ಲಾ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 14:31 IST
Last Updated 5 ಫೆಬ್ರುವರಿ 2019, 14:31 IST
ಬೀದರ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಯೋಜಿಸಿರುವ ಜಿಲ್ಲಾ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಉದ್ಘಾಟಿಸಿದರು. ಸುರೇಶ ಚನಶೆಟ್ಟಿ, ಶಾಲಿನಿ ಚಿಂತಾಮಣಿ, ಭಾರತಬಾಯಿ ಶೇರಿಕಾರ, ಎಂ.ಜಿ. ದೇಶಪಾಂಡೆ,ಸಚಿವ ಬಂಡೆಪ್ಪ ಕಾಶೆಂಪೂರ, ಅಕ್ಕ ಅನ್ನಪೂರ್ಣ, ಚನ್ನವೀರ ಶಿವಾಚಾರ್ಯ, ಗುರುನಾಥ ಕೊಳ್ಳೂರ, ವಿರೂಪಾಕ್ಷ ಗಾದಗಿ ಹಾಗೂ ರಾಜೇಂದ್ರ ಗಂದಗೆ ಇದ್ದಾರೆ
ಬೀದರ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಯೋಜಿಸಿರುವ ಜಿಲ್ಲಾ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಉದ್ಘಾಟಿಸಿದರು. ಸುರೇಶ ಚನಶೆಟ್ಟಿ, ಶಾಲಿನಿ ಚಿಂತಾಮಣಿ, ಭಾರತಬಾಯಿ ಶೇರಿಕಾರ, ಎಂ.ಜಿ. ದೇಶಪಾಂಡೆ,ಸಚಿವ ಬಂಡೆಪ್ಪ ಕಾಶೆಂಪೂರ, ಅಕ್ಕ ಅನ್ನಪೂರ್ಣ, ಚನ್ನವೀರ ಶಿವಾಚಾರ್ಯ, ಗುರುನಾಥ ಕೊಳ್ಳೂರ, ವಿರೂಪಾಕ್ಷ ಗಾದಗಿ ಹಾಗೂ ರಾಜೇಂದ್ರ ಗಂದಗೆ ಇದ್ದಾರೆ   

ಬೀದರ್: ‘ಪತ್ರಿಕೆ ಹಾಗೂ ಕೃತಿ ಓದುವುದನ್ನು ಕಡಿಮೆ ಮಾಡಿ ನಮ್ಮ ಹೆಜ್ಜೆ ಗುರುತುಗಳು ಅಳಿಸಿ ಹೋಗುವ ಹಂತಕ್ಕೆ ತಲುಪಿದ್ದೇವೆ. ಕನ್ನಡಕ್ಕೆ ಪುನಃಶ್ಚೇತನ ನೀಡುವ ದಿಸೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕನ್ನಡದ ಕಹಳೆ ಮೊಳಗಬೇಕು’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿರುವ ಜಿಲ್ಲಾ 17ನೆಯಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಂಗಳೂರಲ್ಲಿ ಇಂದು ಶೇಕಡ 10ರಷ್ಟು ಮಾತ್ರ ಕನ್ನಡ ಉಳಿದಿದೆ. ನಿಜವಾದ ಕನ್ನಡ ಉಳಿದಿರುವುದು ಉತ್ತರ ಕರ್ನಾಟಕದಲ್ಲಿ ಮಾತ್ರ. ದಕ್ಷಿಣ ಕರ್ನಾಟಕದಲ್ಲಿ ಕನ್ನಡ ಅಳಿಸಿ ಹೋಗುವ ಕಾಲಘಟಕ್ಕೆ ಬಂದಿದೆ. ಸಾಹಿತ್ಯಿಕ ಚಟುವಟಿಕೆಗಳು ಹಾಗೂ ಇಂತಹ ಸಮ್ಮೇಳನಗಳು ನಡೆಯದಿದ್ದರೆ ನಮ್ಮ ಭಾಷೆ ಜಲ ಸಂರಕ್ಷಣೆ ಇಲ್ಲದ ಬರಡು ಭೂಮಿಯಂತಾಗಲಿದೆ’ ಎಂದು ಎಚ್ಚರಿಸಿದರು.

ADVERTISEMENT

‘ಇಂಗ್ಲಿಷ್‌ ಭಾಷೆ ಕಬಂಧ ಬಾಹುಗಳನ್ನು ಚಾಚಿಕೊಂಡು ಬಂದಿದೆ. ಅಷ್ಟೇ ಅಲ್ಲ ವೈಚಾರಿಕ ಪ್ರಜ್ಞೆಯನ್ನೂ ಕಸಿಯುತ್ತಿದೆ. ಇಂಗ್ಲಿಷ್‌ ದಾಳಿಯಿಂದ ಪಾರಾಗಲು ಕನ್ನಡವನ್ನು ಚೆನ್ನಾಗಿ ಬಳಸುವ ಅಗತ್ಯವಿದೆ’ ಎಂದು ಹೇಳಿದರು.

‘ಅಧ್ಯಾತ್ಮ ಹಾಗೂ ಸಾಹಿತ್ಯ ಮಿಳಿತವಾಗಬೇಕು. ಅವು ಸಮ ಸಮವಾಗಿ ಸೇರಿಕೊಳ್ಳಬೇಕು. ಅಧ್ಯಾತ್ಮದೊಂದಿಗೆ ಬೆರೆತ ಸಾಹಿತ್ಯವು ಜೀವನ ಕಲೆಯನ್ನು ಹೇಳಿಕೊಡುತ್ತದೆ. ಸಾಹಿತ್ಯವನ್ನು ವಿಸ್ತರಿಸಿಕೊಂಡು ಹೃದಯದ ದೀಪವನ್ನು ಹಚ್ಚಬೇಕಾಗಿದೆ’ ಎಂದು ತಿಳಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ಹಾಗೂ ಹಾರಕೂಡ ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ನೇತೃತ್ವ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಸ್ಮರಣ ಸಂಚಿಕೆ ಹಾಗೂ ‘17 ಜನ ಸಾಂಸ್ಕೃತಿಕ ನಾಯಕರು’  ಕೃತಿ ಬಿಡುಗಡೆ ಮಾಡಿದರು.

ಚಿತ್ರಕಲಾ ಪ್ರದರ್ಶನ ಮಳಿಗೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಸಮ್ಮೇಳನದ ನಿಕಟಪೂರ್ವ ಸರ್ವಾಧ್ಯಕ್ಷ ಎಂ.ಜಿ.ದೇಶಪಾಂಡೆ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಗಂದಗೆ, ಕೋಶಾಧ್ಯಕ್ಷ ಟಿ.ಎಂ.ಮಚ್ಚೆ ಇದ್ದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಸ್ವಾಗತಿಸಿದರು. ಅಜ್ಜಂಪೂರ ಶ್ರುತಿ ನಿರೂಪಿಸಿದರು. ರಾಜಕುಮಾರ ಹೆಬ್ಬಾಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.