ಅಷ್ಟೂರು (ಜನವಾಡ): ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ಮಾರ್ಚ್ 21ರಿಂದ ಹಿಂದೂ-ಮುಸ್ಲಿಂ ಭಾವೈಕ್ಯದ ಜಾತ್ರೆ ಆರಂಭವಾಗಲಿದ್ದು, ಜಾತ್ರೆ ನಿಮಿತ್ತ ಗ್ರಾಮದ ಬಹಮನಿ ಅರಸರ ಗುಮ್ಮಟಗಳ ಪರಿಸರದಲ್ಲಿ ಸಕಲ ಸಿದ್ಧತೆ ನಡೆದಿದೆ.
ಜನರ ಮನೋರಂಜನೆಗಾಗಿ ಜಾತ್ರೆಗೆ ಈಗಾಗಲೇ ವಿವಿಧೆಡೆಯಿಂದ ರೈಲು, ಜೋಕಾಲಿ, ಬ್ರೇಕ್ ಡ್ಯಾನ್ಸ್ ಮೊದಲಾದ ಯಂತ್ರಗಳು ಬಂದಿವೆ. ಕಾಯಿ, ಕರ್ಪೂರ, ಬೆಂಡು, ಬತಾಸು, ತಿಂಡಿ ತಿನಿಸು, ಮಕ್ಕಳ ಆಟಿಕೆಯ ತಾತ್ಕಾಲಿಕ ಮಳಿಗೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿವೆ.
ಸುಲ್ತಾನ್ ಅಹಮ್ಮದ್ ಶಾ ವಲಿ ಬಹಮನಿ ಅವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುವ ಜಾತ್ರೆಗೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳದ ಜಂಗಮರ ಪ್ರವೇಶದೊಂದಿಗೆ ಶುಕ್ರವಾರ (ಮಾ.21) ಚಾಲನೆ ಸಿಗಲಿದೆ. 24ರಂದು ಸಂಜೆ 6ಕ್ಕೆ ದೀಪೋತ್ಸವ, 25ರಂದು ಸಿಡಿಮದ್ದು ಪ್ರದರ್ಶನ, 26 ರಂದು ಜಂಗಿ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ಜಾತ್ರೆಯ ಜಂಗಿ ಕುಸ್ತಿ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದ್ದು, ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಟ್ಟಿಗಳ ಕುಸ್ತಿ ವೀಕ್ಷಣೆಗೆ ಅಪಾರ ಸಂಖ್ಯೆಯ ಜನ ಸೇರುತ್ತಾರೆ.
ಕಲಾಂ ಓದುವುದು, ಶಂಖ ಊದುವುದು, ಸಮಾಧಿಗೆ ಪುಷ್ಪವೃಷ್ಟಿ, ಗುಮ್ಮಟದ ನಾಲ್ಕೂ ದಿಕ್ಕುಗಳಲ್ಲಿ ಪೂಜೆ ಸಲ್ಲಿಕೆ ಭಕ್ತಿ, ಶ್ರದ್ಧೆಯಿಂದ ನೆರವೇರಲಿವೆ ಎಂದು ತಿಳಿಸುತ್ತಾರೆ ಗ್ರಾಮದ ಸುಲ್ತಾನ್ ಖಲೀಲ್ ಶಾ ಬಹಮನಿ. ಸುಲ್ತಾನ್ ಅಹಮ್ಮದ್ ಶಾ ವಲಿ ಬಹಮನಿ ಅವರನ್ನು ಮುಸ್ಲಿಮರು ‘ವಲಿ’ ಹಾಗೂ ಹಿಂದುಗಳು ‘ಅಲ್ಲಮಪ್ರಭು’ ಎಂದು ಪೂಜಿಸುತ್ತಾರೆ. ಬಹಮನಿ ಸುಲ್ತಾನರ ಕಾಲದಿಂದಲೂ ಈ ಜಾತ್ರೆ ನಡೆದುಕೊಂಡು ಬಂದಿದೆ ಎಂದು ಹೇಳುತ್ತಾರೆ ಅವರು.
ಪ್ರತಿ ವರ್ಷ ಹೋಳಿ ಹುಣ್ಣಿಮೆ ನಂತರ ಅಷ್ಟೂರು ಜಾತ್ರೆ ನಡೆಯುತ್ತದೆ. ಗುಮ್ಮಟ ಪರಿಸರದಲ್ಲಿ ಈಗಾಗಲೇ ಸಂದಲ್ ನೆರವೇರಿದೆಸುಲ್ತಾನ್ ಖಲೀಲ್ ಶಾ ಬಹಮನಿ ಅಷ್ಟೂರು ಗ್ರಾಮಸ್ಥ
ವಿಜಯಪುರ ಜಿಲ್ಲೆಯ ಚಡಚಣದಿಂದ ವಿವಿಧ ಮನೋರಂಜನಾ ಯಂತ್ರಗಳನ್ನು ತಂದಿದ್ದೇವೆ. ಉತ್ತಮ ವ್ಯಾಪಾರದ ನಿರೀಕ್ಷೆ ಇಟ್ಟುಕೊಂಡಿದ್ದೇವೆ.ನಾಥಾ ಭೋಸ್ಲೆ ಚಡಚಣ ಸರ್ಕಸ್ ಕಂಪನಿ
ಸರ್ವ ಧರ್ಮೀಯರು ಭಾಗಿ
ಜನವಾಡ: ಅಷ್ಟೂರು ಜಾತ್ರೆ ಸರ್ವ ಧರ್ಮ ಸಮನ್ವಯತೆಗೆ ಹೆಸರಾಗಿದೆ. ಅಂತೆಯೇ ಜಾತಿ ಮತ ಪಂಥ ಎನ್ನದೇ ಸರ್ವ ಧರ್ಮೀಯರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಕರ್ನಾಟಕ ತೆಲಂಗಾಣ ಆಂಧ್ರಪ್ರದೇಶ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ವಲಿ ಅವರ ಸಮಾಧಿಗೆ ಬಟ್ಟೆ ಹೂವಿನ ಚಾದರ ಕಾಯಿ ಕರ್ಪೂರ ಅಗರಬತ್ತಿ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸುತ್ತಾರೆ. ಗ್ರಾಮಸ್ಥರು ಬರುವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡುತ್ತಾರೆ.
ಗುಮ್ಮಟಕ್ಕೆ ಚಿನ್ನದ ಲೇಪನ
ವಿನ್ಯಾಸ ಜನವಾಡ: ಅಷ್ಟೂರು ಸಮೀಪದ ಬಹಮನಿ ಅರಸರ ಗುಮ್ಮಟಗಳಲ್ಲಿ ಸುಲ್ತಾನ್ ಅಹಮದ್ ಷಾ ವಲಿ ಬಹಮನಿ ಅವರ ಸಮಾಧಿ ಇರುವ ಗುಮ್ಮಟ ವಿಶೇಷ ವಿನ್ಯಾಸದಿಂದಾಗಿ ಗಮನ ಸೆಳೆಯುತ್ತದೆ. ಗುಮ್ಮಟದ ಒಳಗೆ ಮೇಲ್ಭಾಗದಲ್ಲಿ ಚಿನ್ನದ ಲೇಪನ ವೈವಿಧ್ಯಮಯ ಬಣ್ಣಗಳ ವಿನ್ಯಾಸ ನಯನ ಮನೋಹರವಾಗಿದೆ. 622ವರ್ಷಗಳ ಹಿಂದೆ ಗುಮ್ಮಟ ನಿರ್ಮಿಸಲಾಗಿದೆ. ವಿದೇಶಿ ಕಲಾವಿದರು ಗುಮ್ಮಟದ ಒಳಭಾಗಕ್ಕೆ ಅಂದದ ಸ್ವರೂಪ ನೀಡಿದ್ದಾರೆ ಎಂದು ಸುಲ್ತಾನ್ ಖಲೀಲ್ ಶಾ ಬಹಮನಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.