ADVERTISEMENT

ಔರಾದ್: ನೀರಿಗಾಗಿ ತೀರದ ಜನರ ಬವಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 6:14 IST
Last Updated 30 ಏಪ್ರಿಲ್ 2025, 6:14 IST
ಔರಾದ್ ಸಮೀಪದ ಹಂದಿಕೇರಾ ಗ್ರಾಮಸ್ಥರು ಸುಡು ಬಿಸಿಲಲ್ಲಿ ನೀರಿಗಾಗಿ ಪರದಾಡಿದರು
ಔರಾದ್ ಸಮೀಪದ ಹಂದಿಕೇರಾ ಗ್ರಾಮಸ್ಥರು ಸುಡು ಬಿಸಿಲಲ್ಲಿ ನೀರಿಗಾಗಿ ಪರದಾಡಿದರು   

ಔರಾದ್: ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗೆ ಹೊಂದಿರುವ ತಾಲ್ಲೂಕಿನ ವಿವಿಧ ಗ್ರಾಮ ಹಾಗೂ ತಾಂಡಾಗಳ ಜನರಿಗೆ ಕುಡಿಯುವ ನೀರು ದೊರೆಯುತ್ತಿಲ್ಲ. ಹೀಗಾಗಿ ನಿತ್ಯ ಬೆಳಗಾದರೆ ನೀರಿಗಾಗಿ ಪರದಾಡುವಂತಾಗಿದೆ.

ತಾಲ್ಲೂಕಿನ 97 ಗ್ರಾಮ ಹಾಗೂ 104 ತಾಂಡಾಗಳ ಪೈಕಿ 40ಕ್ಕೂ ಹೆಚ್ಚು ಜನವಸತಿ ಪ್ರದೇಶದಲ್ಲಿ ನೀರಿನ ಬರ ಕಾಣಿಸಿಕೊಂಡಿದೆ. ನೀರಿನ ಮೂಲ ಇರುವ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳು ಬತ್ತಿ ಹೋಗಿ ಜನ ಕುಡಿಯಲು ನೀರಿಗಾಗಿ ಅಹೋರಾತ್ರಿ ಪರದಾಡುತ್ತಿದ್ದಾರೆ. ಕರಂಜಿ(ಕೆ), ಕರಂಜಿ(ಬಿ), ಮಾನೂರ, ಸಾವರಗಾಂವ, ಸೊಸೈಟಿ ತಾಂಡಾ, ಘಮಾ ತಾಂಡಾ, ಬಾರ್ಡ್ರ್ ತಾಂಡಾ ಸೇರಿದಂತೆ ಗಡಿ ಗ್ರಾಮಗಳ ಜನ ನೀರಿಗಾಗಿ ವಲಸೆ ಹೋಗಬೇಕಾಗಿದೆ.

‘ನಾವು ಎರಡು ತಿಂಗಳಿನಿಂದ ನೀರಿನ ಕೊರತೆ ಎದುರಿಸುತ್ತಿದ್ದೇವೆ. ಇರುವ ಎರಡು ಕೊಳವೆ ಬಾವಿ ಬತ್ತಿ ಹೋಗಿವೆ. ಹೊಸದಾಗಿ ಕೊರೆದ ಬಾವಿಯಲ್ಲೂ ನೀರು ಸಿಕ್ಕಿಲ್ಲ. ಹೀಗಾಗಿ ನಾವು ಜನ ಜಾನುವಾರುಗಳೊಂದಿಗೆ ಪಕ್ಕದ ತೆಲಂಗಾಣಕ್ಕೆ ವಲಸೆ ಹೋಗುತ್ತಿದ್ದೇವೆ’ ಎಂದು ಘಾಮಾ ತಾಂಡಾ ನಿವಾಸಿ ಸುನೀಲ ಅಸಹಾಯಕರಾದರು.

ADVERTISEMENT

‘ನಮ್ಮ ಊರಲ್ಲಿ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಜಾಸ್ತಿಯಾಗಿದೆ. ಪ್ರತಿಭಟನೆ ಮಾಡಿದಾಗ ತಹಶೀಲ್ದಾರ್ ಮಹೇಶ ಪಾಟೀಲ ಗ್ರಾಮಕ್ಕೆ ಬಂದು ನೀರಿನ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು. ಖಾಸಗಿ ಜಮೀನಿನಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸಿದರು. ಈಗ ಅಲ್ಲಿ ನೀರು ಬಂದರೂ ಆ ವ್ಯಕ್ತಿ ಜನರಿಗೆ ನೀರು ಕೊಡಲು ಸಿದ್ಧನಿಲ್ಲ’ ಎಂದು ಕರೆಂಜಿ(ಕೆ) ಗ್ರಾಮಸ್ಥರು ಗೋಳು ತೋಡಿಕೊಂಡಿದ್ದಾರೆ.

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಸಾವರಗಾಂವ, ಚಿಕ್ಲಿ, ಚೊಂಡಿಮುಖೇಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಜನರು ‘ನಮಗೆ ಕುಡಿಯಲು ನೀರು ಕೊಡಿ ನಿಮಗೆ ಮತ್ತೇನು ಕೇಳುವುದಿಲ್ಲ’ ಎಂದು ತಮ್ಮ ಊರಿಗೆ ಬಂದವರ ಎದುರು ಗೋಳು ತೋಡಿಕೊಳ್ಳುತ್ತಿದ್ದಾರೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಜಾಸ್ತಿಯಾಗಿದೆ. ನೀರಿನ ಮೂಲಗಳೆಲ್ಲ ಬತ್ತಿ ಹೋಗಿವೆ. 600 ಅಡಿ ಆಳದಲ್ಲಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಆದರೂ ಇರುವ ಅಲ್ಪ ನೀರಿನ ಮೂಲ ಬಳಿಸಿ ಜನರಿಗೆ ಕುಡಿಯಲು ನೀರು ಪೂರೈಸುತ್ತಿದ್ದೇವೆ’ ಎನ್ನುತ್ತಾರೆ ತಾಲ್ಲೂಕು ಮಟ್ಟದ ಅಧಿಕಾರಿಗಳು.

‘ಸದ್ಯ ತೀವ್ರ ಸಮಸ್ಯೆ ಇರುವ ಮಹಾದೇವ ಪಾಟಿ ತಾಂಡಾ, ಟಾವರ್ ತಾಂಡಾ, ರಾಯಪಳ್ಳಿ, ಕಪ್ಪೆಕೇರಿ ಸೇರಿದಂತೆ ನಾಲ್ಕು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 35 ಗ್ರಾಮಗಳಲ್ಲಿ ಖಾಸಗಿ ನೀರಿನ ಮೂಲ ಬಳಸಿಕೊಂಡು ಜನ ಜಾನುವಾರುಗಳಿಗೆ ನೀರಿನ ದಾಹ ನೀಗಿಸುತ್ತಿದ್ದೇವೆ’ ಎಂದು ತಾಲ್ಲೂಕು ಪಂಚಾಯತ್ ಇಒ ಮಾಣಿಕರಾವ ಪಾಟೀಲ ತಿಳಿಸಿದ್ದಾರೆ.

‘ನಮ್ಮ ತಾಲ್ಲೂಕಿನಲ್ಲಿ ಜೆಜೆಎಂ ಕಾಮಗಾರಿಯಿಂದ ನೀರಿನ ಸಮಸ್ಯೆ ಪರಿಹರಿಸುವ ಬದಲು ಸಮಸ್ಯೆ ಜಾಸ್ತಿಯಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು ಕೆಲ ಗ್ರಾಮಗಳಿಗೆ ಖುದ್ದು ಭೇಟಿ ನೀಡಿದ್ದೇನೆ. ಅವರ ಸಮಸ್ಯೆ ಪರಿಹರಿಸುವುದು ನಮ್ಮ ಕರ್ತವ್ಯ. ಆ ಕೆಲಸ ಮಾಡುತ್ತಿದ್ದೇವೆ
ಮಹೇಶ ಪಾಟೀಲ ತಹಶೀಲ್ದಾರ್ ಔರಾದ್
ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳುತ್ತಿದ್ದೇವೆ. ಸಹಾಯವಾಣಿ ತೆರೆದು ದೂರು ಬಂದ ತಕ್ಷಣ ಆ ಊರಿಗೆ ಹೋಗಿ ಸಮಸ್ಯೆ ಪರಿಹರಿಸುತ್ತಿದ್ದೇವೆ
ಮಾಣಿಕರಾವ ಪಾಟೀಲ ಔರಾದ್ ತಾಪಂ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.