ಔರಾದ್: ಕಳೆದ ಮೂರು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ತಾಲ್ಲೂಕಿನ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ತೊಂದರೆಯಾಗಿದೆ.
ಡೊಂಗರಗಾಂವ್ ಗ್ರಾಮದ ಭವರಾವ ಹಣಮಂತ ಮೇತ್ರೆ, ಮಮದಾಪುರ ಗ್ರಾಮದ ಗುರಪ್ಪ ಸಂಗಪ್ಪ ಹಾಗೂ ಭಂಡಾರಕುಮಟಾ ಗ್ರಾಮದ ಪದ್ಮಿನಿಬಾಯಿ ತ್ರಿಂಬಕ ಅವರ ಮಣ್ಣಿನ ಮನೆಯ ಅರ್ಧದಷ್ಟು ಗೋಡೆ ಕುಸಿದಿದೆ. ಪ್ರಾಣಹಾನಿ ಆಗಿಲ್ಲ.
‘ಗೋಡೆ ಕುಸಿತದಿಂದ ಮಳೆ ನೀರು ಬಂದು ಮನೆಯಲ್ಲಿನ ದವಸ ದಾನ್ಯ, ಬಟ್ಟೆ ಬರೆ ಇತರೆ ಸಾಗ್ರಿಗಳು ಹಾಳಾಗಿವೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಈಗಲೂ ಮಣ್ಣಿನ ಮನೆಗಳಿದ್ದು, ಹೆಚ್ಚು ಮಳೆಯಾದರೆ ಕುಸಿದು ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತೆ ವಹಿಸಲು ತಾಲ್ಲೂಕಿನ ಎಲ್ಲ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಮಹೇಶ ಪಾಟೀಲ ತಿಳಿಸಿದ್ದಾರೆ.
ಅಕಾಲಿಕ ಮಳೆಯಿಂದ ಮಾವು, ತರಕಾರಿ, ಪಪ್ಪಾಯಿ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಸಾಕಷ್ಟು ಕಡೆ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಕುಡಿಯಲು ನೀರಿನ ಸಮಸ್ಯೆಯಾಗಿದೆ. ಸಂಬಂಧಿತರು ತಕ್ಷಣ ಅಗತ್ಯ ಕ್ರಮಕೈಗೊಂಡು ರೈತರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.