ADVERTISEMENT

ಮತಗಳ್ಳತನ ಹುಸಿ ಆರೋಪ; ಕಾಂಗ್ರೆಸ್ ಜನರ ಕ್ಷಮೆಯಾಚಿಸಲಿ: ಖೂಬಾ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:13 IST
Last Updated 11 ಆಗಸ್ಟ್ 2025, 4:13 IST
<div class="paragraphs"><p>ಭಗವಂತ ಖೂಬಾ</p></div>

ಭಗವಂತ ಖೂಬಾ

   

ಬೀದರ್: ‘ಮತಗಳ್ಳತನ ನಡೆದಿದೆ ಎಂದು ಹುಸಿ ಆರೋಪ ಮಾಡಿದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆಗ್ರಹಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಸೋತು ಅಸ್ತಿತ್ವ ಕಳೆದುಕೊಂಡು ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ’ ಎಂದರು.

ADVERTISEMENT

‘ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಮಷಿನ್‌ಗಳು ಸರಿಯಾಗಿರುತ್ತವೆ. ಸೋತಾಗ ಮಾತ್ರ ಕೆಡುತ್ತವೆ. ಕೆಲ ವಿದೇಶಿ ಶಕ್ತಿಗಳ ಮಾತು ಕೇಳಿ ರಾಹುಲ್ ಗಾಂಧಿ ಅವರು ಮತಗಳ್ಳತನದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪ ನಿಜ ಎಂದಾದರೆ ಪ್ರಮಾಣ ಮಾಡಿ ಎಂದು ಆಯೋಗ ಕೇಳಿದಾಗ ಸಂಸತ್‌ನಲ್ಲಿ ಈಗಾಗಲೇ ಪ್ರಮಾಣ ಮಾಡಿದ್ದೇನೆ ಎಂದು ಹೇಳುವ ಮೂಲಕ ಜಾರಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಸಂವಿಧಾನ ಬದಲಾವಣೆ ಮಾಡಿದ್ದು ಮತ್ತು ಅದನ್ನು ದುರ್ಬಲಗೊಳಿಸಿದ್ದು ಕಾಂಗ್ರೆಸ್. ನಿಮ್ಮ ನಾಟಕ ದೇಶದ 140 ಕೋಟಿ ಜನರಿಗೆ ಗೊತ್ತಾಗಿದೆ. ಸ್ವಯಂ ಬುದ್ಧಿಯಿಲ್ಲದ ರಾಹುಲ್ ಗಾಂಧಿ ಮಾಡುವ ಆರೋಪಕ್ಕೆ ನಾವು ಜಗ್ಗಲ್ಲ, ಬಗ್ಗಲ್ಲ. ಬಿಜೆಪಿ ಸರ್ಕಾರ ಗಟ್ಟಿಯಾಗಿದೆ’ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ,‘ದೇಶದ ಅಭಿವೃದ್ಧಿ ಸಹಿಸದ ರಾಹುಲ್ ಗಾಂಧಿ ವಿರೋಧಿಗಳ ಶಕ್ತಿಗಳ ಟೂಲ್ ಕಿಟ್ ಆಗಿ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ, ರಾಜಶೇಖರ ನಾಗಮೂರ್ತಿ, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಶ್ರೀನಿವಾಸ ಚೌಧರಿ ಹಾಗೂ ಬಸವರಾಜ ಪವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.