ಭಾಲ್ಕಿ: ಗ್ರಾಮೀಣ ಭಾರತದ ಸೌಹಾರ್ದ ಮತ್ತು ಆರ್ಥಿಕ ಸುಭದ್ರತೆಯಲ್ಲಿ ಜಾತ್ರೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಗೋರ್ಟಾದ ರಾಜಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಕಾರ್ಯಕ್ರಮದ ಧರ್ಮ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹಳ್ಳಿಗಳು ದೇಶದ ಆತ್ಮಗಳಾಗಿವೆ. ಗ್ರಾಮಗಳ ಬೆಳವಣಿಗೆಯಿಂದಲೇ ದೇಶದ ಅಭಿವೃದ್ಧಿ. ಜಾತ್ರೆಗಳು ಗ್ರಾಮೀಣ ಸಂಸ್ಕೃತಿ ಮತ್ತು ಆರ್ಥಿಕ ಬೆಳವಣಿಗೆಗೆ ಸರಳವಾದ ಮಾರ್ಗ ತೋರಿಸುತ್ತವೆ. ದೇಶದ ಆರ್ಥಿಕ ಶಕ್ತಿಯೊಂದಿಗೆ ಸಾಂಸ್ಕೃತಿಕ ಶಕ್ತಿಯೂ ವೃದ್ದಿಸಬೇಕು ಎಂದು ತಿಳಿಸಿದರು.
ರಥೋತ್ಸವ ನಿಮಿತ್ತ ಆಯೋಜಿಸಿದ್ದ ಪಲ್ಲಕ್ಕಿ ಉತ್ಸವಕ್ಕೆ ಶ್ರೀಶೈಲ ಅಕ್ಕಮಹಾದೇವಿ ಚೈತನ್ಯ ಪೀಠಾಧಿಪತಿ ಕರುಣಾದೇವಿ ತಾಯಿ ಚಾಲನೆ ನೀಡಿದರು. ಪಲ್ಲಕ್ಕಿ ಉತ್ಸವವು ಮಂಗಳ ವಾದ್ಯಗಳು, ಪುರವಂತರ ವೀರಗಾಸೆ, ಭಜನೆ, ಹಲಗೆಮೇಳ, ಕುಂಭ ಕಳಸಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಸಾಗಿ ರಥ ಸಮೀಪ ತಲುಪಿತು.
ನಂತರ ಥೇರು ಮೈದಾನದಲ್ಲಿ ರಥದ ಹತ್ತಿರ ಕರುಣಾದೇವಿತಾಯಿ, ರಾಜೇಶ್ವರ ಶಿವಾಚಾರ್ಯರು, ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಪರಮೇಶ್ವರ ಪಾಟೀಲ, ಮುಖಂಡರಾದ ಶ್ರೀಕಾಂತ ದಾನಾ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದಲ್ಲಿ ಹಲಬರ್ಗಾ, ತಳವಾಡ, ಜ್ಯಾಂತಿ, ರುದನೂರ, ಮಳಚಾಪೂರ, ಜೋಳದಪಕಾ, ನೇಳಗಿ, ಸಿದ್ದೇಶ್ವರ, ತಳವಾಡ(ಕೆ), ಕರಡ್ಯಾಳ ಸೇರಿದಂತೆ ವಿವಿಧ ಗ್ರಾಮದ ಭಕ್ತರು ಭಾಗವಹಿಸಿ ಭಕ್ತಿ ಭಾವ ಮೆರೆದರು.
ನಟ ಬಿ.ಜೆ.ವಿಷ್ಣುಕಾಂತ, ಡಾ.ಓಂಕಾರ ಸ್ವಾಮಿ, ಗುಂಡೇರಾವ್ ಪಾಟೀಲ, ಶ್ರೀಕಾಂತ ದಾನಿ, ಶರಣಬಸವ ಪಿ.ಪಾಟೀಲ, ಆದರ್ಶ ಪಾಟೀಲ, ಗುರುನಾಥ ಬಿರಾದಾರ, ಕವಿರಾಜ ಪಾಟೀಲ, ವಿಜಯಕುಮಾರ ಹಾಳೆ, ವಿಜಯಕುಮಾರ ಗೋದಿಹಿಪ್ಪರಗೆ, ಸೂರ್ಯಕಾಂತ ಜೆಮಶೆಟ್ಟೆ, ವಿಷ್ಣುಕಾಂತ ಜಮಶೆಟ್ಟೆ, ಬಸವರಾಜ ಹಾಲಹಳ್ಳಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.