ADVERTISEMENT

ಭಾಲ್ಕಿ | ಸ್ವಂತ ಖರ್ಚಿನಲ್ಲಿ ಶಾಲೆಗೆ ಬಣ್ಣ

ಶಾಲಾ ಕೈತೋಟ ನಿರ್ಮಾಣ; ಶಿಕ್ಷಕರ ಮಾದರಿ ಕಾರ್ಯಕ್ಕೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 6:08 IST
Last Updated 8 ಏಪ್ರಿಲ್ 2025, 6:08 IST
ಭಾಲ್ಕಿ ತಾಲ್ಲೂಕಿನ ಸೈದಾಪುರ ವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಸುಣ್ಣ ಬಣ್ಣ ಬಳಿಸಿರುವುದು
ಭಾಲ್ಕಿ ತಾಲ್ಲೂಕಿನ ಸೈದಾಪುರ ವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಸುಣ್ಣ ಬಣ್ಣ ಬಳಿಸಿರುವುದು   

ಭಾಲ್ಕಿ: ಸಮಾನ ಮನಸ್ಕ ಶಿಕ್ಷಕರು ಶಾಲೆಯತ್ತ ಮಕ್ಕಳನ್ನು, ಪಾಲಕರನ್ನು ಸೆಳೆಯಬೇಕು. ಸರ್ಕಾರಿ ಶಾಲೆ ಉಳಿಯಬೇಕು ಎಂಬ ಸದುದ್ದೇಶದಿಂದ ಸ್ವಂತ ಖರ್ಚಿನಲ್ಲಿ ಮತ್ತು ಸ್ವಂತ ಪರಿಶ್ರಮದಿಂದ ಶಾಲೆಗೆ ಸುಣ್ಣ, ಬಣ್ಣ ಬಳಿದಿದ್ದಾರೆ. ಶಾಲಾ ಕೈತೋಟ ನಿರ್ಮಿಸಿದ್ದಾರೆ.

ವಿದ್ಯಾರ್ಥಿಗಳು ಬುಧವಾರ ದಿನದಂದೂ ಒಂದೇ ಬಣ್ಣಗಳ ಸಮವಸ್ತ್ರ ಧರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ಬಟ್ಟೆ ವಿತರಿಸಿದ್ದಾರೆ. ಶಿಕ್ಷಕರ ಈ ಮಾದರಿ ಕಾರ್ಯ ಗ್ರಾಮಸ್ಥರ, ಪಾಲಕರ, ಅಧಿಕಾರಿಗಳ ಮೆಚ್ಚುಗೆ ಗಳಿಸಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ ಮೂರು ಕಿ.ಮೀ ಅಂತರದಲ್ಲಿರುವ ಸೈದಾಪುರ ವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಪರಿಶ್ರಮದಿಂದ ಸುಣ್ಣ ಬಣ್ಣ ಕಂಡು ಬೀಗುತ್ತಿದೆ.

ADVERTISEMENT

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿರುವ ಪಾಲಕರ ಸಂಖ್ಯೆ ಹೆಚ್ಚಾಗಿರುವ ಸದ್ಯದ ಸ್ಥಿತಿಯಲ್ಲಿ ಅನೇಕ ಸರ್ಕಾರಿ ಶಾಲೆಗಳ ಕೋಣೆಗಳು ಮಕ್ಕಳಿಲ್ಲದೆ ಭಣಗುಡುತ್ತಿವೆ.

‘ಇಂತಹದೇ ಸ್ಥಿತಿಯಿಂದ ನಲುಗಿ ಹೋಗಿದ್ದ ಶಾಲೆಗೆ ಜೀವಕಳೆ ತುಂಬಬೇಕು. ಪಾಲಕರ ಮನಸ್ಥಿತಿ ಬದಲಾಯಿಸಬೇಕು, ಮಕ್ಕಳು ಸ್ವಇಚ್ಛೆಯಿಂದ ಶಾಲೆಯತ್ತ ಬರುವಂತಾಗಬೇಕು ಎಂದು ಸಮಾನ ಮನಸ್ಕ ಶಿಕ್ಷಕರು ಚಿಂತನೆಯಲ್ಲಿ ತೊಡಗಿದ್ದಾಗ ಈ ಕಾರ್ಯ ಮಾಡಬೇಕು ಎಂಬ ಆಲೋಚನೆ ತಲೆಗೆ ಹೊಳೆಯಿತು’ ಎಂದು ಕ್ರಿಯಾಶೀಲ ಶಿಕ್ಷಕ ಚಂದ್ರಕಾಂತ ತಳವಾಡೆ ತಿಳಿಸಿದರು.

ಈ ಶಾಲೆಯ ಕನ್ನಡ ಮಾಧ್ಯಮದ 1ರಿಂದ 5ನೇ ತರಗತಿವರೆಗೆ 12 ವಿದ್ಯಾರ್ಥಿಗಳ ದಾಖಲಾತಿ ಇದೆ. ಮರಾಠಿ ಮಾಧ್ಯಮದಲ್ಲಿ ಓರ್ವ ವಿದ್ಯಾರ್ಥಿ ಇದ್ದಾನೆ. ಮೂವರು ಶಿಕ್ಷಕರು ಇದ್ದೇವೆ. ಸುಮಾರು ₹30 ಸಾವಿರ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗಿದೆ. ವರ್ಗ ಕೋಣೆಗಳಲ್ಲಿ ಆಕರ್ಷಕ ಕಲಿಕಾ ಚಾರ್ಟ್‌ಗಳನ್ನು ನೇತು ಹಾಕಲಾಗಿದೆ. ಶಾಲಾ ಕೈತೋಟ ನಿರ್ಮಿಸಿ, ಸುಣ್ಣ ಬಣ್ಣ ಬಳಿಯಲಾಗಿದೆ. ನೆಲಹಾಸು ಹಾಕಲಾಗಿದೆ. ಕಚೇರಿ ಕೋಣೆಯಲ್ಲಿ ಮ್ಯಾಟ್ ಹಾಗೂ ಮಹಾತ್ಮರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ನಮ್ಮ ಈ ಎಲ್ಲ ಪ್ರಯತ್ನಗಳ ಫಲವಾಗಿ ಈಗ ನಿತ್ಯ 12ರಲ್ಲಿ 11 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಮೊದಲು ಕೇವಲ ಇಬ್ಬರು ಮಕ್ಕಳು ಬರುತ್ತಿದ್ದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಪಾಲಕರು ತಮ್ಮ ಮಕ್ಕಳಿಗೆ ನಮ್ಮ ಶಾಲೆಯಲ್ಲಿ ದಾಖಲಾತಿ ಮಾಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ’ ಎಂದು ಮುಖ್ಯಶಿಕ್ಷಕ ಜ್ಞಾನೇಶ್ವರ ಬಿರಾದಾರ ಹೇಳಿದರು.

‘ನಮ್ಮ ಶಾಲಾ ಕೈತೋಟದಲ್ಲಿ ಟೊಮೆಟೊ, ಬೀನ್ಸ್‌, ಹಿರೇಕಾಯಿ, ಕೊತ್ತಂಬರಿ, ಮೆಂತೆ ಪಲ್ಯ, ಕರಿಬೇವು ಬೆಳೆಯುತ್ತಿದ್ದೇವೆ. ಮಧ್ಯಾಹ್ನದ ಬಿಸಿಯೂಟ ತಯಾರಿಗೂ ಅನುಕೂಲ ಆಗುತ್ತಿದೆ’ ಎಂದು ಚಂದ್ರಕಾಂತ ತಳವಾಡೆ, ವಿಶ್ವನಾಥ ಕರಕರೆ ಹೇಳಿದರು.

‘ಬೇಸಿಗೆ ರಜೆಯಲ್ಲಿಯೂ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರಾಗಬಾರದು. ಅವರ ಕಲಿಕಾಮಟ್ಟ ಹೆಚ್ಚಳವಾಗಬೇಕು ಎಂಬ ಉದ್ದೇಶದಿಂದ ಬೆಳಿಗ್ಗೆ 8ರಿಂದ 12ರವರೆಗೆ ವಿಶೇಷ ತರಗತಿ ನಡೆಸಬೇಕು ಎಂಬ ಯೋಚನೆ ಇದೆ. ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಶ್ರಮಿಸುವ ಶಿಕ್ಷಕರಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಸಮೀಪದ ತಾಲ್ಲೂಕು ಕೇಂದ್ರದ ಖಾಸಗಿ ಶಾಲೆಗಳಿಗೆ ಕಳುಹಿಸದೆ. ನಮ್ಮ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಸಬೇಕು’ ಎನ್ನುತ್ತಾರೆ ಶಿಕ್ಷಕರು.

ಶಿಕ್ಷಕರ ಸ್ವಆಸಕ್ತಿಯಿಂದ ನಿರ್ಮಾಣಗೊಂಡ ಶಾಲಾ ಕೈತೋಟ
ಶಾಲಾ ವರ್ಗ ಕೋಣೆಯಲ್ಲಿ ಆಕರ್ಷಕ ಕಲಿಕಾ ಚಾರ್ಟ್ ಗಳನ್ನು ಸ್ವಂತ ಖರ್ಚಿನಲ್ಲಿ ನೇತು ಹಾಕಿರುವುದು
ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು
ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯ ಪ್ರಗತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪಾಲಕರಿಗೆ ತಿಳಿ ಹೇಳುತ್ತಿದ್ದೇವೆ
ಉಮೇಶ ಭೋಸ್ಲೆ ಎಸ್‌ಡಿಎಂಸಿ ಅಧ್ಯಕ್ಷ
ನಮಗೆ ಅನ್ನ ಕೊಡುತ್ತಿರುವ ಸರ್ಕಾರಿ ಶಾಲೆ ಉಳಿದು ಬೆಳೆಯಬೇಕು ಎಂಬ ಸದುದ್ದೇಶದಿಂದ ಸಮಾನ ಮನಸ್ಕ ಶಿಕ್ಷಕರು ಶ್ರಮಿಸುತ್ತಿದ್ದೇವೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು
ಜ್ಞಾನೇಶ್ವರ ಬಿರಾದಾರ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.