ADVERTISEMENT

ಮೈನವಿರೇಳಿಸಿದ ವೈಮಾನಿಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 13:06 IST
Last Updated 11 ಆಗಸ್ಟ್ 2022, 13:06 IST
ಬೀದರ್‌ನಲ್ಲಿ ಗುರುವಾರ ಆಗಸದಲ್ಲಿ ಪ್ರದರ್ಶನ ನೀಡಿದ ಸೂರ್ಯಕಿರಣ ವಿಮಾನ
ಬೀದರ್‌ನಲ್ಲಿ ಗುರುವಾರ ಆಗಸದಲ್ಲಿ ಪ್ರದರ್ಶನ ನೀಡಿದ ಸೂರ್ಯಕಿರಣ ವಿಮಾನ   

ಬೀದರ್‌: ಇಲ್ಲಿಯ ವಾಯುಪಡೆ ತರಬೇತಿ ಕೇಂದ್ರದ ಮೂರು ಸೂರ್ಯಕಿರಣ ವಿಮಾನಗಳು ಆಗಸದಲ್ಲಿ ಮೈನವಿರೇಳಿಸುವಂಥ ಪ್ರದರ್ಶನ ನೀಡಿದವು.

ಗುರುವಾರ ಒಂದು ಕಿ.ಮೀ ಉದ್ದದ ತಿರಂಗಾ ನಡಿಗೆ ನಗರದ ನೆಹರೂ ಕ್ರೀಡಾಂಗಣಕ್ಕೆ ಬರುತ್ತಿದ್ದಂತೆಯೇ ವೈಮಾನಿಕ ಪ್ರದರ್ಶನ ಆರಂಭವಾಯಿತು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳು, ಮಕ್ಕಳು ಹಾಗೂ ಸಾರ್ವಜನಿಕರು ಆಗಸದತ್ತ ದೃಷ್ಟಿ ನೆಟ್ಟು ಕುಳಿತಿರುವಾಗಲೇ ವಿಮಾನಗಳು ತ್ರಿವರ್ಣ ಹೊಗೆ ಚೆಲ್ಲುತ್ತ ಮಿಂಚಿನಂತೆ ಬಂದವು.

ಮೊದಲ ಸುತ್ತಿನಲ್ಲಿ ಮೂರು ವಿಮಾನಗಳು ಒಟ್ಟೊಟ್ಟಿಗೆ ಬಂದವು. ಇನ್ನೊಂದು ಸುತ್ತಿನಲ್ಲಿ ಮೂರು ದಿಕ್ಕಿನಲ್ಲಿ ಹಾರಾಟ ನಡೆಸಿ ಪ್ರದರ್ಶನ ಅಂತ್ಯಗೊಳಿಸಿದವು. ನಂತರ ತರಬೇತಿ ವಿಮಾನಗಳು ಹಾರಾಟ ನಡೆಸಿದವು. ಹತ್ತು ನಿಮಿಷದಲ್ಲಿ ಪ್ರದರ್ಶನ ಸಮಾರೋಪಗೊಂಡಿತು.

ADVERTISEMENT

ಅನೇಕ ಪಾಲಕರು ತಮ್ಮ ಮಕ್ಕಳನ್ನು ಕ್ರೀಡಾಂಗಣಕ್ಕೆ ಕರೆದುಕೊಂಡು ಬಂದಿದ್ದರು. ವಿಮಾನ ಹಾರಾಟದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾರತ ಮಾತೆ ಜಯ ಘೋಷ ಮೊಳಗಿಸಿದರು. ಉಕ್ಕಿನ ಹಕ್ಕಿಗಳ ಆರ್ಭಟ ಆಲಿಸಿ ಮಕ್ಕಳು ಕೇಕೆ ಹಾಕಿ ಸಂಭ್ರಮಿಸಿದರು. ಪ್ರದರ್ಶನ ಮಕ್ಕಳ ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.