ADVERTISEMENT

ಮೂಢ ನಂಬಿಕೆ ತೊರೆಯಿರಿ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 15:14 IST
Last Updated 7 ಮಾರ್ಚ್ 2020, 15:14 IST
ಬೀದರ್‌ನಲ್ಲಿ ಶನಿವಾರ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ ಉದ್ಘಾಟಿಸಿದರು
ಬೀದರ್‌ನಲ್ಲಿ ಶನಿವಾರ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ ಉದ್ಘಾಟಿಸಿದರು   

ಬೀದರ್: ‘ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರು ಮೂಢ ನಂಬಿಕೆಗಳನ್ನು ತೊರೆಯಬೇಕು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಸಿಂಧೆ ಸಲಹೆ ನೀಡಿದರು.

ಜಿಲ್ಲಾ ಬಾಲ ಭವನ ಸಮಿತಿ, ಭಾರತ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿರುವ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಜನರು ಮೂಢನಂಬಿಕೆಗೆ ಒಳಗಾಗಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದರೂ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಇದರಿಂದ ಕಾಯಿಲೆ ಹೆಚ್ಚಾಗಿ ಪಡಬಾರದಂತಹ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಮಕ್ಕಳು ತಪ್ಪು ಎನಿಸುವ ವಿಷಯಗಳ ಕುರಿತು ನೇರವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ಮಕ್ಕಳ ವಿಜ್ಞಾನ ಹಬ್ಬದ ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಎಸ್.ಮನೋಹರ ಮಾತನಾಡಿ, ‘ಸಮಾಜದಲ್ಲಿ ರೂಢಿಯಲ್ಲಿರುವ ಮೂಢ ನಂಬಿಕೆಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಸಿ ಅವರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಲು ಮಕ್ಕಳ ವಿಜ್ಞಾನ ಹಬ್ಬ ನೆರವಾಗಲಿದೆ’ ಎಂದು ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಚಂದ್ರಪ್ಪ ಹೆಬ್ಬಾಳಕರ್, ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಕಲಾಲ್ ದೇವಿಪ್ರಸಾದ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ ಗೋರನಾಳಕರ್, ಕಲಾವಿದರಾದ ಶೇಷಪ್ಪ ಚಿಟ್ಟಾ, ಶಂಭುಲಿಂಗ ವಾಲ್ದೊಡ್ಡಿ, ಶ್ರೀನಿವಾಸ ಬಾಳೂವಾಲೆ, ಬಿಂದುಸಾರ್ ಧನ್ನೂರ, ಸೈಯದ್ ಇಮ್ರಾನ್, ಸೂರ್ಯಕಾಂತ ಮೊರೆ, ಗೌರಿಶಂಕರ ಪರ್ತಾಪೂರೆ, ಕಸ್ತೂರಿ ಪಟಪಳ್ಳಿ, ಜಗದೇವಿ ಭೋಸ್ಲೆ, ವಿಜಯಲಕ್ಷ್ಮಿ, ಶಿಲ್ಪಾ ಮಾಳಗೆ, ರೋಹಿತ್, ನಿವೇದಿತಾ ಇದ್ದರು.

ಬೆಳಿಗ್ಗೆ ಮಕ್ಕಳ ಜಾಥಾಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವು ಮಡಿವಾಳ ವೃತ್ತದಿಂದ ಜಿಲ್ಲಾ ಬಾಲ ಭವನ ಸಮಿತಿವರೆಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.