ADVERTISEMENT

ಉತ್ತಮ ರಸ್ತೆ ನಿರ್ಮಿಸಿ: ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:52 IST
Last Updated 5 ಮೇ 2022, 2:52 IST
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಕೆ ಗ್ರಾಮದಿಂದ ಚಿಟಗುಪ್ಪ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಕೆ ಗ್ರಾಮದಿಂದ ಚಿಟಗುಪ್ಪ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ   

ಹುಮನಾಬಾದ್: ಸಮೀಪದ ಹಳ್ಳಿಖೇಡ್ ಕೆ ಗ್ರಾಮದಿಂದ ಚಿಟಗುಪ್ಪ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಜಲ್ಲಿ ಕಲ್ಲುಗಳು ಹಾಕಿ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ವಾಹನ ಸವಾರರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸಂಬಂಧಿತರು ತಕ್ಷಣ ರಸ್ತೆ ಮರು ನಿರ್ಮಾಣ ಮಾಡಲು ಮುಂದಾಗಬೇಕು.

ಪ್ರಕಾಶ್, ಗ್ರಾಮಸ್ಥ

ಚರಂಡಿ ನಿರ್ಮಿಸಿ

ADVERTISEMENT

ಖಟಕಚಿಂಚೋಳಿ: ಸಮೀಪದ ಕುಮಾರಚಿಂಚೋಳಿ ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ಸರಿಯಾದಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲೆಡೆ ಗಬ್ಬು ವಾಸನೆ ಹರಡುತ್ತಿದೆ.

ಹಂದಿಗಳ ಕಾಟವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಕೊಳಚೆ ಸಂಗ್ರಹದಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಯಾದ ಚರಂಡಿ ನಿರ್ಮಿಸಬೇಕು.

ಉಮೇಶಕುಮಾರ, ಗ್ರಾಮಸ್ಥ

ತಗ್ಗು, ಗುಂಡಿ ಮುಚ್ಚಿ

ಭಾಲ್ಕಿ: ಇಲ್ಲಿಯ ಮಹಾತ್ಮ ಗಾಂಧಿ ವೃತ್ತದ ತಿರುವು ಮತ್ತು ಭಾಲ್ಕಿ-ಬೀದರ್‌ ಮುಖ್ಯರಸ್ತೆಯ ತಾಜ್‌ ಮೆಡಿಕಲ್‌ ಮುಂಭಾಗದ ರಸ್ತೆಯ ಮಧ್ಯೆ ತಗ್ಗು, ಗುಂಡಿ ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ತುಂಬಾ ತೊಂದರೆ ಆಗುತ್ತಿದೆ. ಕೆಲವೊಮ್ಮೆ ತಗ್ಗು, ಗುಂಡಿಯಲ್ಲಿ ನೀರು ಸಂಗ್ರಹ ಆಗುತ್ತಿದೆ. ಇದರಿಂದ ಚಾಲಕರಿಗೆ ರಸ್ತೆಯಲ್ಲಿ ತಗ್ಗು ಇರುವುದು ಗೊತ್ತಾಗದೆ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಕೂಡಲೇ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ತಗ್ಗು, ಗುಂಡಿ ಮುಚ್ಚಿಸಿ ಅನುಕೂಲ ಮಾಡಿಕೊಡಬೇಕು.

ಪಟ್ಟಣ ನಿವಾಸಿಗಳು, ಭಾಲ್ಕಿ

ಶಾಲೆ ಗೇಟ್ ದುರಸ್ತಿ ಮಾಡಿ

ಹುಲಸೂರ: ಪಟ್ಟಣದ ಹೊರವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಗೆ

ಅಳವಡಿಸಿದ ಗೇಟ್‌ಗಳನ್ನು ಕಿಡಗೇಡಿಗಳು ಮುರಿದು ಹಾಕಿದ್ದಾರೆ.

ಬಿಡಾಡಿ ದನಗಳು, ಇತರೆ ಪ್ರಾಣಿಗಳು ಶಾಲಾ ಆವರಣಕ್ಕೆ ನುಗುತ್ತಿವೆ. ಸಂಜೆಯ ವೇಳೆಯಲ್ಲಿ ಕೆಲವು ಯುವಕರು ಆವರಣದಲ್ಲಿ ಬೀಡುಬಿಟ್ಟು ತಮ್ಮ ಅಡೆಯನ್ನಾಗಿ ಮಾಡಿಕೊಂಡಿದ್ದಾರೆ. ಶಾಲೆಯ ಆವರಣ ಸ್ವಚ್ಛತೆ ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಗೇಟ್ ದುರಸ್ತಿಗೊಳಿಸಿ ರಕ್ಷಣೆ ಒದಗಿಸಬೇಕು.

ತಜೀಮ್‌ , ಸಲಿಂ ಮತ್ತು ಮುಸ್ತಾಫಾ, ನಿವಾಸಿಗಳು

ಕೊಳವೆ ಬಾವಿ ದುರಸ್ತಿಗೊಳಿಸಿ

ಬಸವಕಲ್ಯಾಣ: ನಗರದ ಆಶ್ರಯ ಕಾಲೊನಿಯಲ್ಲಿನ ಕೊಳವೆ ಬಾವಿಯ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಕೊಳವೆ ಬಾವಿಯಲ್ಲಿ ನೀರು ಇದೆ. ಆದರೆ, ಕೆಟ್ಠು ನಿಂತ ಕಾರಣ ನೀರಿನ ಬಳಕೆ ಆಗುತ್ತಿಲ್ಲ. ಇದರ ದುರಸ್ತಿಗಾಗಿ ಅನೇಕ ಸಲ ಆಗ್ರಹಿಸಿದರೂ ಪ್ರಯೋಜನ ಆಗಿಲ್ಲ. ಇನ್ನು ಮುಂದಾದರೂ ದುರಸ್ತಿ ಕೈಗೊಂಡು ಓಣಿ‌ ನಿವಾಸಿಗಳಿಗೆ ನೀರಿನ ಸೌಲಭ್ಯ ಒದಗಿಸಬೇಕು.

ಧನರಾಜ ರಾಜೋಳೆ, ನಿವಾಸಿ

ಸಂಚಾರ ನಿಯಮ ಉಲ್ಲಂಘನೆ ತಡೆಯಿರಿ

ಔರಾದ್: ತಾಲ್ಲೂಕು ಕೇಂದ್ರದಲ್ಲಿ ಕೆಲವು ಪ್ರಯಾಣಿಕ ಹಾಗೂ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬರುತ್ತಿದೆ.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಲ್ಲುತ್ತಿವೆ. ಆಟೊ, ಜೀಪ್‍ಗಳ ಚಾಲಕರು ಪ‍್ರಾಯಾಣಿಕರನ್ನು ಟಾಪ್ ಮೇಲೆ ಕೂಡಿಸಿಕೊಂಡು ಸಂಚರಿಸುತ್ತಿವೆ. ಮಹಾರಾಷ್ಟ್ರಕ್ಕೆ ಸೇರಿದ ಅನುಮತಿ ಇಲ್ಲದ ವಾಹನಗಳು ಹೆಚ್ಚಾಗಿ ಓಡಾಡುತ್ತವೆ. ಆದರೂ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಗಮನ ಹರಿಸಿ ಪಟ್ಟಣದಲ್ಲಿ ಸಂಚಾರ ನಿಯಮ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಆನಂದ ಜಿರೋಬೆ, ಔರಾದ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.