ADVERTISEMENT

ಶಾಹೀನ್‌ ಶಾಲೆ ಪ್ರಕರಣ: ಮೇಲ್ನೋಟಕ್ಕಿದು ದೇಶದ್ರೋಹ ಪ್ರಕರಣ ಅಲ್ಲ ಎಂದ ನ್ಯಾಯಾಲಯ

ನಿರೀಕ್ಷಣಾ ಜಾಮೀನು ಆದೇಶದಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 13:58 IST
Last Updated 7 ಮಾರ್ಚ್ 2020, 13:58 IST
   

ಬೀದರ್‌: ‘ಇಲ್ಲಿಯ ಶಾಹೀನ್‌ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ ಹಾಗೂ ಪಾಲಕಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ದೇಶ ದ್ರೋಹ ಎಸಗಿರುವುದಕ್ಕೆ ಎಲ್ಲಿಯೂ ಆಧಾರ ಇಲ್ಲ. ಮೇಲ್ನೋಟಕ್ಕೆ ಇದು ದೇಶದ್ರೋಹದ ಪ್ರಕರಣದಂತೆ ಕಂಡುಬರುತ್ತಿಲ್ಲ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌ ಹಾಗೂ ಇತರರಿಗೆ ಮಾರ್ಚ್ 3ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯದ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಅವರು,ತಮ್ಮ ಆದೇಶದಲ್ಲಿ ಈ ಉಲ್ಲೇಖ ಮಾಡಿದ್ದಾರೆ.

‘ನಾಟಕ ನಡೆಯುವಾಗ ಆರೋಪಿಗಳು ಸ್ಥಳದಲ್ಲಿರುವುದಕ್ಕೆ ದಾಖಲೆಗಳಿಲ್ಲ. ಆ ನಾಟಕ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಿಲ್ಲ. ದಾಖಲೆಗಳನ್ನು ತೋರಿಸದೇ ಇದ್ದರೆ ದೇಶ ಬಿಡುವ ಪರಿಸ್ಥಿತಿ ಬರಬಹುದು ಎಂಬ ವಿದ್ಯಾರ್ಥಿಗಳ ಸಂಭಾಷಣೆ ಇದೆ. ಈ ಮಾಹಿತಿಯನ್ನು ಪರಿಗಣಿಸಿದರೆ ಸೆಕ್ಷನ್ 124ಎಗೆ (ದೇಶದ್ರೋಹ) ಬೇಕಾದ ಅಂಶಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ’ ಎಂಬ ಅಭಿಪ್ರಾಯವನ್ನು ಜಾಮೀನು ಮಂಜೂರಿಗೆ ನೀಡಿರುವ ಕಾರಣಗಳಲ್ಲಿ ನ್ಯಾಯಾಲಯ ಉಲ್ಲೇಖಿಸಿದೆ.

ADVERTISEMENT

‘ನಾಟಕದಲ್ಲಿನ ಸಂಭಾಷಣೆಯನ್ನು ಇಡಿಯಾಗಿ ಓದಿದ ಮೇಲೆ ಅದರಲ್ಲಿ ಎಲ್ಲಿಯೂ ಸರ್ಕಾರದ ವಿರುದ್ಧ, ದೇಶದ್ರೋಹದಂತಹ ಅಂಶ ಕಂಡು ಬರುವುದಿಲ್ಲ. ಭಾರತೀಯ ದಂಡ ಸಂಹಿತೆ ಕಲಂ 124 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಮೇಲ್ನೋಟಕ್ಕೆ ಯಾವುದೇ ಆಧಾರಗಳು ಕಂಡು ಬರುತ್ತಿಲ್ಲ. ದಾಖಲೆಗಳನ್ನು ತೋರಿಸದೆ ಇದ್ದರೆ ದೇಶ ಬಿಡುವ ಪರಿಸ್ಥಿತಿ ಬರಬಹುದು ಎಂದು ವಿದ್ಯಾರ್ಥಿಗಳು ಪ್ರಶ್ನೋತ್ತರದಲ್ಲಿ ಸಂಭಾಷಿಸಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಆ ಸಂಭಾಷಣೆ ಸರ್ಕಾರದ ವಿರುದ್ಧ ಯಾವುದೇ ದ್ವೇಷ ಹುಟ್ಟಿಸುವುದಿಲ್ಲ’ ಎಂದು ನ್ಯಾಯಾಧೀಶರು ದಾಖಲಿಸಿದ್ದಾರೆ.

‘ಇಡೀ ದೇಶದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳು ಮತ್ತು ರ್‍ಯಾಲಿಗಳು ನಡೆಯುತ್ತಿವೆ. ಸರ್ಕಾರದ ಕ್ರಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಮತ್ತು ನ್ಯಾಯಯುತವಾಗಿ ಅವುಗಳನ್ನು ಸರಿಪಡಿಸಿಕೊಳ್ಳುವ ಹಕ್ಕು ನಾಗರಿಕರಿಗೆ ಇದೆ. ಇವು ಜನವರಿ 21ರಂದು ಶಾಲೆಯಲ್ಲಿ ನಾಟಕ ಆಡುವಾಗ ಹೇಳಿದ ಸಂಭಾಷಣೆಗಳಾಗಿವೆ. ಜನವರಿ 26 ರಂದು ಇದರ ಮಾಹಿತಿ ಸಿಕ್ಕಿದೆ. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡದಿದ್ದರೆ ನಾಟಕದ ಬಗ್ಗೆ ಆಗಲಿ, ಆ ಸಂಭಾಷಣೆಯ ಬಗ್ಗೆ ಆಗಲಿ ಸಾರ್ವಜನಿಕರಿಗೆ ಗೊತ್ತೇ ಆಗುತ್ತಿರಲಿಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಐಪಿಸಿ ಕಲಂ 153(ಎ) ಅಡಿಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಬಗೆಗಿನ ಆರೋಪ ಮಾಡಲಾಗಿದೆ. ಆದರೆ, ಯಾವುದೇ ಸಮುದಾಯದ ಬಗ್ಗೆ ನಾಟಕದಲ್ಲಿ ಪ್ರಸ್ತಾಪಿಸಿಲ್ಲ. ಸಿಎಎ, ಎನ್ಆರ್‌ಸಿ ಕಾಯ್ದೆಯಡಿ ಅಗತ್ಯ ದಾಖಲೆ ತೋರಿಸದೇ ಇದ್ದರೆ ಎಲ್ಲ ಮುಸ್ಲಿಮರು ದೇಶ ಬಿಡಬೇಕಾಗುತ್ತದೆ ಎಂದು ನಾಟಕವಾಡಿದ ಬಾಲಕಿಯರು ಹೇಳಿದ್ದಾರೆ. ನಾಟಕದಲ್ಲಿ ಬೇರೆ ಯಾವುದೇ ಧರ್ಮದ ಬಗ್ಗೆ ಹೇಳಿಕೆ ಇಲ್ಲ. ಹೀಗಾಗಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

‘ಶಾಹೀನ್‌ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದು, ಇಲ್ಲಿಯ ವಿದ್ಯಾರ್ಥಿಗಳು ಹಾಗೂ ಸಂಸ್ಥೆ ಮಾಡಿರುವ ಹಲವು ಸಾಧನೆ ಮತ್ತು ಪ್ರಶಸ್ತಿ ಪಡೆದಿದ್ದನ್ನು ನ್ಯಾಯಾಲಯ ಪರಿಗಣಿಸಿದೆ’ ಎಂದು ಉಲ್ಲೇಖಿಸಲಾಗಿದೆ.

ಜ.21ರಂದು ಶಾಹೀನ್‌ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶಿಸಲಾಗಿತ್ತು. ಜ.26ರಂದು ನೀಲೇಶ ರಕ್ಷಾಳೆ ಅವರು ನ್ಯೂಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.ಪ್ರಧಾನಿ ವಿರುದ್ಧ ಅವಹೇಳನಕಾರಿ ಸಂಭಾಷಣೆ ಹೊಂದಿರುವ ನಾಟಕದಲ್ಲಿ ಶಾಲಾ ಬಾಲಕಿಯೊಬ್ಬಳು ಅಭಿನಯಿಸಿದ್ದಾಳೆ ಎನ್ನುವ ದೂರಿನ ಮೇರೆಗೆ ಪೊಲೀಸರು ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

ನಂತರ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ನಾಟಕ ಪ್ರದರ್ಶಿಸಿದ ಬಾಲಕಿಯ ತಾಯಿಯನ್ನು ಬಂಧಿಸಲಾಗಿತ್ತು. ಅವರೂ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯವರಿಗೂ ನಿರೀಕ್ಷಣಾ ಜಾಮೀನು ದೊರೆತಿದೆ.

ಬಾಲಾಪರಾಧ ನ್ಯಾಯ ಕಾಯ್ದೆ ಉಲ್ಲಂಘಿಸಿ ಪೊಲೀಸರು ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.