ಬೀದರ್: ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಂತೆ ಪರಿಶಿಷ್ಟ ಪಂಗಡಗಳಾದ ರಾಜಗೊಂಡ, ಮೇಧಾ ಪಾರ್ದಿಗಳಿಗೆ ಆಯೋಗ ರಚಿಸಿ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಸಮಾಜದ ಮುಖಂಡ ವಿವೇಕ್ ರಾಯ್ಶಿಡಂ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ರಾಜಗೊಂಡರ ಸಾಂಸ್ಕೃತಿಕ ನಾಯಕರಾದ ಬಾಬುರಾವ ಶೇಡ್ಮಕಿ, ರಾಣಿ ಕಮಲಾಪತಿ, ಕುಂರಾಮ್ ಭೀಮ್, ರಾಣಿ ದುರ್ಗಾವತಿ ಅವರ ಜೀವನ ಚರಿತ್ರೆಗಳನ್ನು ಶಾಲಾ ಪಠ್ಯಯಲ್ಲಿ ಸೇರಿಸಬೇಕು. ಗೊಂಡರ ಮಾತೃ ಭಾಷೆಯಾಗಿರುವ ಗೊಂಡಿಯನ್ನು ಶಾಸ್ತ್ರಿಯ ಸ್ಥಾನಮಾನ ನೀಡಿ 8ನೇ ಅನುಸೂಚಿಯಲ್ಲಿ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜಗೊಂಡ ಸಮಾಜದ ಅಧ್ಯಕ್ಷ ಪಿ .ಟಿ . ಶಾಮು ಮಾತನಾಡಿ, ಅಲೆಮಾರಿ, ಅರೆ ಅಲೆಮಾರಿಯಾಗಿರುವ ರಾಜಗೊಂಡ, ಮೇಧಾ, ಪಾರ್ದಿ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ಇನ್ನು ದೊರೆತಿಲ್ಲ, ಈಗಲೂ ನಾವು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಸರ್ಕಾರದಿಂದ ಬರುವ ಯೋಜನೆಗಳು ಕೇವಲ ಇಲಾಖೆಗಳಲ್ಲಿಯೇ ಉಳಿದಿವೆ. ಹೀಗಾಗಿ ಸೌಲಭ್ಯಗಳು ನಮ್ಮನ್ನು ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದಿರ್ ಮಾತನಾಡಿ, ದೇಶದ ಮೂಲ ನಿವಾಸಿಗಳೇ ಆದಿವಾಸಿಗಳು. ಇವರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಸಮಾಜದ ಪ್ರತಿಯೊಬ್ಬರೂ ಇವರ ಏಳಿಗೆಗೆ ಶ್ರಮಿಸಬೇಕು. ಇವರಿಗೆ ಶಿಕ್ಷಣ, ವಸತಿ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ನೀಡಬೇಕು. ಅಂದಾಗ ಮಾತ್ರ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶಾಲ ರಾಯಶಿಡಂ, ರಾಜಗೊಂಡ ಸಮಾಜದ ಕಾರ್ಯದರ್ಶಿ ಠಾಕುರ್ ಉಯ್ಕೆ, ಪಾರ್ದಿ ಸಮಾಜ ಅಧ್ಯಕ್ಷ ರಾಜೇಂದ್ರ ಪಾರ್ದಿ, ಮೇಧಾ ಸಮಾಜದ ಅಧ್ಯಕ್ಷ ಮಹೇಶ್ ಮೇಧಾ, ಕರ್ನಾಟಕ ಗೊಂಡ ಆದಿವಾಸಿ ಸಂಘದ ಉಪಾಧ್ಯಕ್ಷ ಪಂಡಿತರಾವ್ ಚಿದ್ರಿ, ಕರ್ನಾಟಕ ಗೊಂಡ ಆದಿವಾಸಿ ಸಂಘದ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ಅಧ್ಯಕ್ಷ ನಾರಾಯಣರಾವ್ ಭಂಗಿ, ಟೋಕರಿ ಕೋಳಿ ಸಮಾಜದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾಣಿಕ್ ನೆಳಗಿ, ಸಂಗೊಳ್ಳಿ ರಾಯಣ್ಣ ಗೊಂಡ ಸಂಘದ ಅಧ್ಯಕ್ಷ ಬಾಬುರಾವ ಮಲ್ಕಾಪುರ, ಟೋಕರಿ ಕೋಳಿ ಸಮಾಜ ಸಂಘದ ಉಪಾಧ್ಯಕ್ಷ ಸುನಿಲ್ ಖಾಶೇಂಪೂರ್, ನಿಜ ಶರಣ ಅಂಬಿಗರ ಯುವ ಸೇನೆಯ ಜಿಲ್ಲಾಧ್ಯಕ್ಷ ಸುನಿಲ್ ಭಾವಿಕಟ್ಟಿ, ಈಶ್ವರ ಮಲ್ಕಾಪೂರ್, ಬಾಬುರಾವ್ ಖಾಶೇಂಪೂರ್,ರವಿಕುಮಾರ್ ಸಿರ್ಸಿ, ಜಗನ್ನಾಥ ಜಂಬಗಿ, ಪುಂಡಲೀಕರಾವ್ ಇಟಗಂಪಳ್ಳಿ, ವಿಜಯಕುಮಾರ್ ಡುಮ್ಮೆ, ದೀಪಕ್ ಚಿದ್ರಿ, ಭೋಮ್ಮಗೊಂಡ ಚಿಟ್ಟಾವಾಡಿ, ರಘುನಾಥ ಭೂರೆ, ರವಿ ಇಂಜಿನಿಯರ್, ಹಣಮಂತರಾವ್ ಘೋಡಂಪಳ್ಳಿ, ಚಂದ್ರಕಾಂತ್ ಫುಲೆಕರ್ ಸೇರಿದಂತೆ ಇತರರು ಇದ್ದರು.
ಸಂಭ್ರದ ಮೆರವಣಿಗೆ...
ವಿಶ್ವ ಆದಿವಾಸಿ ದಿನಾಚರಣೆಯ ಹಿನ್ನೆಲೆ ಶನಿವಾರ ರಾಜಗೊಂಡ ಸಮುದಾಯದ ವತಿಯಿಂದ ಅದ್ದೂರಿ ಮೆರವಣಿಗೆ ನಡೆಯಿತು. ರಾಜಗೊಂಡ ಕಾಲೋನಿಯಿಂದ ಆರಂಭಗೊಂಡ ಮೆರವಣಿಗೆ ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಜರುಗಿತು. ಮೆರವಣಿಗೆಯಲ್ಲಿ ಹಳದಿ ಹಾಗೂ ಶ್ವೇತ ವರ್ಣದ ಉಡುಗೆ ತೊಟ್ಟ ಯುವಪಡೆ ಧ್ವಜಗಳೊಂದಿಗೆ ಹೆಜ್ಜೆ ಹಾಕಿದರು. ಕೆಲವು ಮಕ್ಕಳು ಆದಿವಾಸಿಗಳಂತೆ ವಸ್ತ್ರ ಧರಿಸಿ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.