ಬೀದರ್: ‘ಕಾರ್ಖಾನೆಯ ಚುನಾವಣೆಯಲ್ಲಿ ಅಕ್ರಮ ನಡೆಯುವುದನ್ನು ತಡೆಯುವುದಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇವೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಖಾನೆಯವರು ರೈತರ ದಾರಿ ತಪ್ಪಿಸಿ, ನಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ರೈತರಿಗೆ ತೊಂದರೆ ಮಾಡುವುದಕ್ಕೆ ನಾವು ಕೋರ್ಟ್‌ಗೆ ಹೋಗಿಲ್ಲ. ಕಾರ್ಖಾನೆಯಲ್ಲಿನ ಭ್ರಷ್ಟಾಚಾರ ಹಾಗೂ ಅಕ್ರಮ ಮತದಾನ ಹತ್ತಿಕ್ಕಲು ಮಾತ್ರ ಕೋರ್ಟ್ ಮೆಟ್ಟಿಲೇರಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
‘ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಒಂದೇ ಕುಟುಂಬದ ಹಿಡಿತದಲ್ಲಿವೆ. ಮತದಾನ ಮುಂದೆ ಹೋದರೆ ಕಾರ್ಖಾನೆ ಕೆಲಸ ನಿಲ್ಲುವುದಿಲ್ಲ. ಜಿಲ್ಲಾಡಳಿತ ಇಂತಹ ಸಂದರ್ಭದಲ್ಲಿ ಕಾರ್ಖಾನೆ ನಡೆಸುತ್ತದೆ. ಹೀಗಾಗಿ ರೈತರು ಯಾರ ಮಾತಿಗೂ ಬೆಲೆ ಕೊಡದೇ ತಪ್ಪು ಗಹಿಕೆ ಹಾಗೂ ವದಂತಿಗಳಿಂದ ದೂರ ಉಳಿದು ನಿರಾಳರಾಗಿರಬೇಕು ಎಂದು ಮನವಿ ಮಾಡಿದರು.
‘ಈಗಾಗಲೇ ಎನ್‌ಎಸ್‌ಎಸ್‌ಕೆ ಚುನಾವಣೆಗೆ ಕಲಬುರಗಿ ಹೈಕೋರ್ಟ್ ತಡೆ ನೀಡಿದೆ. ಎಂಜಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿನ ಚುನಾವಣೆ ಅಕ್ರಮ ತಡೆಯಲು ಕೋರ್ಟ್ ಮೊರೆ ಹೋಗಿದ್ದೇವು. ಆದರೆ ಕೋರ್ಟ್‌ಗಳು ರಜೆಯಿದ್ದಿದ್ದರಿಂದ, ಚುನಾವಣೆ ನಡೆದರೂ ಫಲಿತಾಂಶದ ಮೇಲೆ ರಿಟ್ ಪಿಟಿಶನ್‌ಗೆ ಅನುಮತಿ ನೀಡಿ, ಅಕ್ರಮ ಮತದಾನ ಹತ್ತಿಕ್ಕಲು ಪ್ರಯತ್ನಿಸಿರುವುದು ಸಂತೋಷ ತಂದಿದೆ’ ಎಂದು ಹೇಳಿದರು.
ಉಭಯ ಕಾರ್ಖಾನೆಗಳಲ್ಲಿ ಸುಮಾರು 24,000ವರೆಗೆ ಮತದಾರರಿದ್ದರೂ ಕೇವಲ 4,300 ಮತದಾರರ ಪಟ್ಟಿ ಮಾತ್ರ ಇದೆ. ಎನ್‌ಎಸ್ಎಸ್‌ಕೆ ಕಾರ್ಖಾನೆ ಮಾದರಿಯಂತೆ ಭಾಲ್ಕಿ ತಾಲ್ಲೂಕಿನ ನೇಳಗಿಯ ಅಮೃತ ಶಾಮರಾವ ಜನವಾಡೆ ಅವರು ಕಬ್ಬು ಸಾಗಿಸದಿದ್ದರೂ ಅಥವಾ ಕಾರ್ಖಾನೆಯ ಸಾಮಾನ್ಯ ಸಭೆಗಳಿಗೆ ತೆರಳದಿದ್ದರೂ ಅವರ ಹೆಸರು ಮತದಾನ ಪಟ್ಟಿಯಲ್ಲಿದೆ. ಹಾಗೆಯೇ ಕಣಜಿ ಗ್ರಾಮದ ಕಮಳಮ್ಮ ಸಂಗಪ್ಪ ಅವರು ತೀರಿ ಹೋಗಿ ಐದು ವರ್ಷಗಳಾದರೂ ಅವರ ಹೆಸರು ಮತದಾನ ಪಟ್ಟಿಯಲ್ಲಿರುವುದು ದುರಂತ’ ಎಂದರು.
ಎನ್ಎಸ್ಎಸ್‌ಕೆ ಮಾದರಿಯಲ್ಲಿ ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸ್ಪರ್ಧೆಗಿಳಿಸಲಾಗಿದೆ. ಸಾಮಾನ್ಯ ಕ್ಷೇತ್ರದಿಂದ ಭೀಮರಾವ ಮಂಡೋಳೆ, ರಾಜೇಂದ್ರ ಮಾಲಿ ಹಾಗೂ ಜ್ಞಾನೋಬಾ ನಿರ್ಗುಡೆ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ದಾಕ್ಷಾಯಣಿ ಪೋಲಿಸ್ ಪಾಟೀಲ ಹಾಗೂ ಸರೋಜನಿ ಹಿರಣಾ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಧನರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲಾಗಿದೆ. ಎಂಜಿಎಸ್ಎಸ್‌ಕೆ ಕಾರ್ಖಾನೆಯ ಮತದಾರರು ಕಾರ್ಖಾನೆಯಲ್ಲಿನ ಭ್ರಷ್ಟಾಚಾರ ತಡೆಯಲು ನಮ್ಮ ಈ 6 ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಪಾಟೀಲ ಮನವಿ ಮಾಡಿದರು.
ಗುರುನಾಥ ಜ್ಯಾಂತಿಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಸಭೆ ಸದಸ್ಯ ಶಶಿ ಹೊಸಳ್ಳಿ, ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ನೇಮತಾಬಾದ, ವೀರು ದಿಗ್ವಾಲ್, ಶ್ರೀನಿವಾಸ ಚೌಧರಿ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.