ADVERTISEMENT

ಬಿಜೆಪಿಯಿಂದ ಸಮ್ಮಿಶ್ರ ಸರ್ಕಾರದ ಅಪಪ್ರಚಾರ

ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜಾ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 13:15 IST
Last Updated 3 ಜುಲೈ 2019, 13:15 IST
ಐವನ್‌ ಡಿಸೋಜಾ
ಐವನ್‌ ಡಿಸೋಜಾ   

ಬೀದರ್‌: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿ ಮುಖಂಡರು ಸರ್ಕಾರವನ್ನು ಅಸ್ಥಿರಗೊಳಿಸಲು ನಿರಂತರ ಪ್ರಯತ್ನ ನಡೆಸಿದ್ದಾರೆ. ನಿತ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜಾ ಆರೋಪ ಮಾಡಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಇಬ್ಬರು ಶಾಸಕರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರಬಹುದು. ಪಕ್ಷದ ಮುಖಂಡರು ಅವರ ಮನವೊಲಿಸುವಲ್ಲಿ ನಿರತರಾಗಿದ್ದಾರೆ’ ಎಂದು ತಿಳಿಸಿದರು.

‘ಬಿಜೆಪಿ ಮೈತ್ರಿ ಸರ್ಕಾರಕ್ಕೆ ಗಡುವು ಕೊಡುತ್ತಲೇ ಬಂದಿದೆ. ಕ್ರಿಸ್‌ಮಸ್‌, ರಂಜಾನ್‌ ಹೀಗೆ ಎಲ್ಲ ಗಡುವು ಮುಗಿದಿವೆ. ಇಷ್ಟು ದಿನ ಗಡುವು ಕೊಡುತ್ತಿದ್ದವರು ಈಗ ಇದ್ದಕ್ಕಿದ್ದಂತೆಯೇ ಸರ್ಕಾರ ತಾನಾಗಿ ಬೀಳಲಿದೆ ಎನ್ನುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ಒಂದು ವರ್ಷ ಪೂರೈಸಿದೆ. ಉಳಿದ ನಾಲ್ಕು ವರ್ಷಗಳನ್ನೂ ಪೂರ್ಣಗೊಳಿಸಲಿದೆ. ಅಂತೆಯೇ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರು ಆತ್ಮವಿಶ್ವಾಸದಿಂದ ಇದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದಿಂದ ದುಂದುವೆಚ್ಚ ಆಗುತ್ತಿದೆ ಎಂದು ಪ್ರತಿಪಕ್ಷದವರು ಟೀಕಿಸುತ್ತಿದ್ದಾರೆ. ಹಾಗಿದ್ದರೆ ವಿಮಾನಗಳಲ್ಲಿ ಪ್ರಪಂಚ ಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ದೇಶಕ್ಕೆ ಎಷ್ಟು ಲಾಭ ಆಗಿದೆ ಎನ್ನುವುದನ್ನು ಬಿಜೆಪಿಯವರು ಸ್ಪಷ್ಟಪಡಿಸಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.