ಬೀದರ್: ‘ಎಲ್ಲ ರೀತಿಯ ಸಂತೋಷದ ಗಳಿಗೆಯಲ್ಲಿ ಹಾರ, ತುರಾಯಿ ಹಾಕುವುದನ್ನು ಬಿಟ್ಟು, ಪುಸ್ತಕ ಕೊಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಉಮಾಕಾಂತ ಪಾಟೀಲ ತಿಳಿಸಿದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಹಾಗೂ ಓಂ ಸಿದ್ಧಿವಿನಾಯಕ ಪದವಿ ಕಾಲೇಜಿನ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಏರ್ಪಸಿದ್ದ ವಿಶ್ವ ಪುಸ್ತಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಯಾರು ಪುಸ್ತಕಗಳನ್ನು ತಲೆಬಾಗಿ ಓದುವರೋ ಅವರು ಜೀವನದಲ್ಲಿ ತಲೆಯೆತ್ತಿ ಓಡಾಡಬಲ್ಲರು. ಪುಸ್ತಕಗಳನ್ನು ಸ್ನೇಹಿತರಂತೆ ಪ್ರೀತಿಸಬೇಕು. ಪುಸ್ತಕ ಓದುವುದರಿಂದ ಧೈರ್ಯದಿಂದ ಬದುಕು ನಡೆಸಬಹುದು ಎಂದರು.
ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಮಾತನಾಡಿ, 1995ರ ಏ. 23ರಂದು ಯುನೆಸ್ಕೊ, ಶೆಕ್ಸ್‌ಪೀಯರ್ ಸ್ಮರಣಾರ್ಥ ವಿಶ್ವ ಪುಸ್ತಕ ದಿನ ಆಚರಿಸುವ ನಿರ್ಧಾರ ಕೈಗೊಂಡಿತು. ಅಂದಿನಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಾಧ್ಯಾಪಕ ವಿಜಯಕುಮಾರ ಚಿಟ್ಟೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಹಾಜರಿದ್ದರು. ಜನಪದ ಗಾಯಕ ಎಸ್.ಬಿ.ಕುಚಬಾಳ ಗಾಯನ ಮಾಡಿದರು. ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರೆ, ಸಂಚಾಲಕಿ ಸುನಿತಾ ಕೂಡ್ಲಿಕರ್ ನಿರೂಪಿಸಿದರು. ಪ್ರಾಧ್ಯಾಪಕಿ ಅಂಬಿಕಾ ಬಿರಾದಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.