ADVERTISEMENT

ಬಿಎಸ್‍ಎಸ್‍ಕೆ ಲೀಸ್‍ಗೆ ಬೇಡ

ಎಂಎಲ್‍ಸಿ ಅರವಿಂದಕುಮಾರ ಅರಳಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 16:51 IST
Last Updated 27 ಜನವರಿ 2021, 16:51 IST
ಅರವಿಂದಕುಮಾರ ಅರಳಿ
ಅರವಿಂದಕುಮಾರ ಅರಳಿ   

ಬೀದರ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಲೀಸ್ ಮೇಲೆ ಕೊಡುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ.

ಬಿಜೆಪಿಯವರಿಗೆ ಜಿಲ್ಲೆಯ ರೈತರು ಹಾಗೂ ಕಾರ್ಮಿಕರ ಬಗ್ಗೆ ಚಿಂತೆಯಿದ್ದರೆ ಸರ್ಕಾರದಿಂದ ನೆರವು ಪಡೆದು ಕಾರ್ಖಾನೆ ಪುನರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ವಹಿಸುವ ಪರಿಪಾಠ ಬೆಳೆಸಿಕೊಂಡಿವೆ. ಬಿಎಸ್‍ಎಸ್‍ಕೆ ಬಂದ್‍ನಿಂದಾಗಿ ರೈತರಿಗೆ ತೊಂದರೆಯಾಗುತ್ತಿದ್ದರೂ, ಕಾರ್ಖಾನೆಗೆ ಪುನಶ್ಚೇತನ ನೀಡುವ ಬದಲು ಖಾಸಗಿಯವರಿಗೆ ವಹಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ADVERTISEMENT

₹ 50 ಕೋಟಿ ಅನುದಾನ ಒದಗಿಸಿದ್ದಲ್ಲಿ ಕಾರ್ಖಾನೆ ಪುನಶ್ಚೇತನಗೊಳ್ಳಲಿದೆ. ಆದರೆ, ಬಿಜೆಪಿ ನಾಯಕರು ₹ 200 ಕೋಟಿ ಅನುದಾನ ಒದಗಿಸಿದರೂ ಕಾರ್ಖಾನೆ ಆರಂಭವಾಗದು ಎನ್ನುವ ಭಾವನೆಯನ್ನು ಸರ್ಕಾರ ಮಟ್ಟದಲ್ಲಿ ಮೂಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಳಾರ(ಕೆ) ಸಮೀಪದ ರೇಷ್ಮೆ ಇಲಾಖೆಗೆ ಸೇರಿದ 82 ಎಕರೆ ಪೈಕಿ ಈಗಾಗಲೇ 49.23 ಎಕರೆ ಜಮೀನನ್ನು ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಅದಾಗಿಯೂ ಸ್ವಪ್ರತಿಷ್ಠೆಗಾಗಿ ತೋಟಗಾರಿಕೆ ಮಹಾವಿದ್ಯಾಲಯದ ಸ್ಥಳದಲ್ಲೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲಾಗುವುದು ಎಂದು ಹೇಳಿರುವುದು ಬಿಜೆಪಿ ನಾಯಕರ ಬೌದ್ಧಿಕ ಮಟ್ಟವನ್ನು ಪ್ರದರ್ಶಿಸುತ್ತದೆ ಎಂದು ಹೇಳಿದ್ದಾರೆ.

ರೇಷ್ಮೆ ಇಲಾಖೆ ಜಮೀನು ನೀಡಿದ ಕಾರಣ ತೋಟಗಾರಿಕೆ ಕಾಲೇಜು ಮಾನ್ಯತೆ ರದ್ದಾಗುವುದು ತಪ್ಪಿತು. ಆದರೆ, ಇದೀಗ ಕಾಲೇಜು ಸ್ಥಳದಲ್ಲೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಿದರೆ ಕಾಲೇಜು ಮಾನ್ಯತೆ ರದ್ದಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೀದರ್‍ಗೆ ಮಂಜೂರಾದ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿಶ್ವವಿದ್ಯಾಲಯದ ಸ್ಯಾಟ್‍ಲೈಟ್ ಸೆಂಟರ್, ಹೆಲಿಕಾಪ್ಟರ್ ಬಿಡಿ ಭಾಗಗಳ ತಯಾರಿಕೆ ಘಟಕ, ಬಿಎಸ್‍ಎಫ್ ತರಬೇತಿ ಕೇಂದ್ರ, ಸಿಪೆಟ್‍ಗೆ ಸರಿಯಾದ ಸಮಯದಲ್ಲಿ ಜಾಗ ಒದಗಿಸದಿದ್ದರಿಂದ ಬೇರೆಡೆಗೆ ಹೋಗಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.