ADVERTISEMENT

ಸಿಎಂ ಭ್ರಷ್ಟಾಚಾರದ ಪಾಲುದಾರರು: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 12:33 IST
Last Updated 25 ಜೂನ್ 2025, 12:33 IST
   

ಬೀದರ್‌: ‘ಮುಖ್ಯಮಂತ್ರಿಗಳೇ ಭ್ರಷ್ಟಾಚಾರದ ಪಾಲುದಾರರಾಗಿದ್ದಾರೆ. ಸಿಎಂ ಹೇಳಿದರೆ ಏನೂ ಪ್ರಯೋಜನವಿಲ್ಲ ಎಂದು ಶಾಸಕ ಬಿ.ಆರ್‌. ಪಾಟೀಲರು ಮಾಧ್ಯಮದ ಮುಂದೆ ವಸತಿ ಯೋಜನೆಯ ಅಕ್ರಮದ ಬಗ್ಗೆ ಹೇಳಿದ್ದಾರೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು.

ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕರಾಳ ಇತಿಹಾಸಕ್ಕೆ 50 ವರ್ಷ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

‘ಕಾಂಗ್ರೆಸ್‌ನಲ್ಲಿ ಗಂಡು ಮಕ್ಕಳು ಇಲ್ಲ ಅಂದುಕೊಂಡಿದ್ದೆ. ಬಿ.ಆರ್‌. ಪಾಟೀಲ ಅವರಂತಹ ಗಂಡು ಮಕ್ಕಳಿದ್ದಾರೆ ಎನ್ನುವುದು ನನಗೂ ಗೊತ್ತಾಗಿದೆ. ಅನೇಕ ಭ್ರಷ್ಟ ಕಾಂಗ್ರೆಸ್ಸಿಗರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸತ್ಯ ಹೇಳುವವರಿಗೆ ಕಾಂಗ್ರೆಸ್‌ನಲ್ಲಿ ಜಾಗ ಇಲ್ಲ ಎನ್ನುವುದು ಈಗ ಸಾಬೀತಾಗಿದೆ. ಎಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎನ್ನುವುದನ್ನು ಸಿಎಂಗೆ ತಿಳಿಸಿದರೂ ಅವರು ಗಮನ ಕೊಡಲಿಲ್ಲ’ ಎಂದು ದೂರಿದರು.

ADVERTISEMENT

ಕಾಂಗ್ರೆಸ್‌ನವರು ಭ್ರಷ್ಟಾಚಾರದ ಹಗರಣಗಳನ್ನು ಮಾನಸಿಕವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ, ರಾಜೀನಾಮೆ ಕೊಡುವುದಿಲ್ಲ. ಇದು ಮೊಂಡುತನ. ಇವರು ಬಂದಿದ್ದು ಲೂಟಿ ಮಾಡಲು ಹೊರತು ಜನರ ಸೇವೆಗಲ್ಲ. ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಮುಖ್ಯವಲ್ಲ. ಭ್ರಷ್ಟಾಚಾರದ ಆರೋಪ ಬಂದಾಗ ಸಿಎಂ‌ ರಾಜೀನಾಮೆ ಕೊಡಬೇಕು. ಅಥವಾ ಯಾರ ಮೇಲೆ ಆರೋಪ ಬಂದಿದೆಯೋ ಅವರಿಂದ ರಾಜೀನಾಮೆ ಪಡೆಯಬೇಕು. ಈ ತಾಕತ್ತು ಅವರಿಗೆ ಇಲ್ಲ. ಇವರು ರಾಜ್ಯದ ಸಿಎಂ ಆಗಿರಲು ಯೋಗ್ಯರಲ್ಲ ಎಂದು ಟೀಕಿಸಿದರು.

ಇದು ಹಗರಣಗಳ ಸರ್ಕಾರ. ಒಂದಾದ ನಂತರ ಒಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಒಂದು ಹಗರಣದ ಕುರಿತು ಹೋರಾಟ ಮಾಡಬೇಕು ಎನ್ನುವಷ್ಟರಲ್ಲಿ ಇನ್ನೊಂದು ಹಗರಣ ಆಗುತ್ತದೆ. ಸಿದ್ದರಾಮಯ್ಯನವರು ಸುಳ್ಳುಗಳ ಸರ್ದಾರ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ ಎಂದರು.

ದಮ್ಮಯ್ಯ ನಿನ್ನ ಕಾಲು ಹಿಡಿಯುತ್ತೇನೆ ಎಂದು ಸಿದ್ದರಾಮಯ್ಯನವರು ಸಿಎಲ್‌ಪಿ ಸಭೆ ಕರೆಯುತ್ತಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಸಿಲುಕಿದೆ. ಅದರಿಂದ ಹೊರಬರಲು ಆಗುತ್ತಿಲ್ಲ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಸಲಿದೆ. ತಾರ್ಕಿಕ ಅಂತ್ಯ ಕಾಣುವವರೆಗೆ ವಿರಮಿಸುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.