ADVERTISEMENT

ಔರಾದ್: ಗುಡಪಳ್ಳಿ ಜನರಿಗೆ ಆಸರೆಯಾದ ಚೆಕ್ ಡ್ಯಾಂ

ಮನ್ನಥಪ್ಪ ಸ್ವಾಮಿ
Published 5 ಅಕ್ಟೋಬರ್ 2019, 19:45 IST
Last Updated 5 ಅಕ್ಟೋಬರ್ 2019, 19:45 IST
ಔರಾದ್ ತಾಲ್ಲೂಕಿನ ಮೆಡಪಳ್ಳಿಯಲ್ಲಿ ನಿರ್ಮಿಸಲಾದ ಕಮಾನು ಮಾದರಿ ಚೆಕ್‌ ಡ್ಯಾಂ
ಔರಾದ್ ತಾಲ್ಲೂಕಿನ ಮೆಡಪಳ್ಳಿಯಲ್ಲಿ ನಿರ್ಮಿಸಲಾದ ಕಮಾನು ಮಾದರಿ ಚೆಕ್‌ ಡ್ಯಾಂ   

ಔರಾದ್: ಸದಾ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಗುಡಪಳ್ಳಿ ಮತ್ತು ಸುತ್ತಲಿನ ಗ್ರಾಮಸ್ಥರಿಗೆ ಚೆಕ್ ಡ್ಯಾಂಗಳು ಆಸರೆಯಾಗಿವೆ.

ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಮೆಡಪಳ್ಳಿ, ಗುಡಪಳ್ಳಿ, ಉಜನಿ ಹಾಗೂ ಗಾಂಧಿನಗರ ಸೇರಿದಂತೆ ವಿವಿಧ ತಾಂಡಾಗಳ ಜನರ ಬವಣೆ ನೀಗಿಸಲು ₹13 ಲಕ್ಷ ವೆಚ್ಚದಲ್ಲಿ ನಾಲ್ಕು ಚೆಕ್‌ ಡ್ಯಾಂಗಳನ್ನು ಕಟ್ಟಲಾಗಿದೆ. ಈ ವರ್ಷ ಮಳೆ ಕಡಿಮೆಯಾದರೂ ಸಹ ಚೆಕ್‌ ಡ್ಯಾಂ ಭರ್ತಿಯಾಗಿ ಸುತ್ತಲಿನ ಜನರಲ್ಲಿ ಖುಷಿ ಮನೆ ಮಾಡಿದೆ.

150 ಅಡಿ ಉದ್ದ, 65 ಅಡಿ ಅಗಲ ಹಾಗೂ 5 ಅಡಿ ಆಳದ ಒಟ್ಟು ನಾಲ್ಕು ಚೆಕ್‌ ಡ್ಯಾಂಗಳನ್ನು ಕಟ್ಟಲಾಗಿದೆ. ಉಜನಿ ಮತ್ತು ಮೆಡಪಳ್ಳಿ ಬಳಿ ಪ್ರಾಕೃತಿಕ ಪರಿಸರದಲ್ಲಿ ನಿರ್ಮಿಸಿರುವ ಈ ಕಮಾನು ಮಾದರಿಯ ಚೆಕ್ ಡ್ಯಾಂ ನೋಡುಗರ ಕಣ್ಮನ ಸೆಳೆಯುತ್ತಿವೆ.

ADVERTISEMENT

‘ಕುಡಿಯುವ ನೀರಿಗಾಗಿ ಜನ ತೀವ್ರ ತೊಂದರೆ ಎದುರಿಸುತ್ತಿದ್ದರು. ಸರ್ಕಾರ ಸಾಕಷ್ಟು ಕೊಳವೆ ಬಾವಿ ಕೊರೆಸಿದರೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯರ ನಿಯೋಗ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಭೇಟಿ ಮಾಡಿ ಚೆಕ್ ಡ್ಯಾಂ ಕಟ್ಟುವ ಪ್ರಸ್ತಾವ ಇಟ್ಟಿತು. ಅವರೂ ಅದಕ್ಕೆ ಒಪ್ಪಿಗೆ ನೀಡಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸಹಕರಿಸಿದರು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಾರುತಿರೆಡ್ಡಿ ತಿಳಿಸುತ್ತಾರೆ.

‘ಚೆಕ್ ಡ್ಯಾಂ ಆದಾಗಿನಿಂದ ವಿಫಲವಾದ ಕೊಳವೆ ಬಾವಿಗಳಿಗೆ ಜೀವ ಬಂದಿದೆ. ಕುಡಿಯಲು ಹಾಗೂ ಕ್ರಿಮಿನಾಶಕ ಸಿಂಪಡಿಸಲು ಈ ನೀರನ್ನೇ ಬಳಸಲಾಗುತ್ತಿದೆ. ಕೆಲ ರೈತರು ತರಕಾರಿ ಬೆಳೆಯಲು ಈ ನೀರು ಉಪಯೋಗಿಸಿಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

‘ಗುಡಪಳ್ಳಿ ಪಂಚಾಯಿತಿ ಮೂರು ವರ್ಷಗಳ ಹಿಂದೆ ಹೊಸದಾಗಿ ಅಸ್ತಿತ್ವಕ್ಕೆ ಬಂದಾಗ ಜನ ಕುಡಿಯುವ ನೀರಿನ ಸಮಸ್ಯೆ ಸೇರಿ ಹಲವು ಮೂಲ ಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದರು. ನವೀನರಾಜ್ ಸಿಂಗ್ ಸಿಇಒ ಇದ್ದಾಗ ಕಮಾನು ಮಾದರಿ ಚೆಕ್‌ ಡ್ಯಾಂ ರಾಜ್ಯದಾದ್ಯಂತ ಹೆಸರು ಮಾಡಿತ್ತು. ಈಗ ನಾವು ಅದೇ ಮಾದರಿ ಚೆಕ್ ಡ್ಯಾಂ ನಿರ್ಮಿಸಿದ್ದೇವೆ’ ಎಂದು ಪಿಡಿಒ ಶಿವಾನಂದ ಔರಾದೆ ಹೇಳುತ್ತಾರೆ.

ಗುಡಪಳ್ಳಿ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಸಿಗಲು ಚೆಕ್‌ ಡ್ಯಾಂ ನಿರ್ಮಾಣದಂಥ ಕೆಲಸಗಳು ಸಹಕಾರಿಯಾಗಿವೆ. ವರ್ಷದಲ್ಲಿ 16 ಸಾವಿರ ಮಾನವ ದಿನ ಕೆಲಸ ಸೃಷ್ಟಿಸಿ ಜನರ ಕೈಗೆ ಕೆಲಸ ಕೊಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ₹50 ಲಕ್ಷ ವೆಚ್ಚದಲ್ಲಿ ಪಂಚಾಯಿತಿ ಕಟ್ಟಡ ಕಟ್ಟಲಾಗಿದೆ. ಕಟ್ಟಡದಲ್ಲಿ ಸೋಲಾರ್ ದೀಪ ಮತ್ತು ಮಳೆ ನೀರು ಸಂರಕ್ಷಣೆ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪರಿಸರ ಸ್ನೇಹಿ ಪಂಚಾಯಿತಿ ಎಂಬ ಖ್ಯಾತಿ ಪಡೆದಿದೆ’ ಎಂದು ಅವರು ತಿಳಿಸುತ್ತಾರೆ.

*
ಗ್ರಾಮ ಪಂಚಾಯಿತಿ ಸದಸ್ಯರ ಕಳಕಳಿ ಹಾಗೂ ಮೇಲಾಧಿಕಾರಿಗಳ ಸಹಕಾರದಿಂದ ಅನೇಕ ಜನಪರ ಕಾರ್ಯಕ್ರಮ ರೂಪಿಸಿ ಗುಡಪಳ್ಳಿ ಮಾದರಿ ಗ್ರಾಮ ಎನಿಸಿಕೊಂಡಿದೆ.
-ಶಿವಾನಂದ ಔರಾದೆ, ಪಿಡಿಒ

*
ಮೂರು ವರ್ಷದ ಹಿಂದೆ ಗುಡಪಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಆದಾಗ ಹೆಚ್ಚು ಸಮಸ್ಯೆಗಳಿದ್ದವು. ಪಿಡಿಒ ಹಾಗೂ ಅಧಿಕಾರಿಗಳ ವಿಶೇಷ ಕಾಳಜಿಯಿಂದ ಗ್ರಾಮ ಅಭಿವೃದ್ಧಿಯಾಗಿದೆ
-ಮಾರುತಿರೆಡ್ಡಿ, ಗ್ರಾಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.