ADVERTISEMENT

ವಿದ್ಯಾರ್ಥಿಗಳಿಂದ 18 ಹಳ್ಳಿಗಳಲ್ಲಿ ಸ್ವಚ್ಛತೆ

ಜಿಲ್ಲಾ ಆಡಳಿತ ಅಭಿಯಾನಕ್ಕೆ ಕೈ ಜೋಡಿಸಿದ ‘ಶಾಹೀನ್' ಶಿಕ್ಷಣ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 13:02 IST
Last Updated 27 ಸೆಪ್ಟೆಂಬರ್ 2022, 13:02 IST
ಬೀದರ್‌ ತಾಲ್ಲೂಕಿನ ಕಮಠಾಣದಲ್ಲಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು
ಬೀದರ್‌ ತಾಲ್ಲೂಕಿನ ಕಮಠಾಣದಲ್ಲಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು   

ಬೀದರ್: ಸ್ವಚ್ಛತೆಯೇ ಸೇವೆ ಅಭಿಯಾನ ಪ್ರಯುಕ್ತ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಬೀದರ್ ತಾಲ್ಲೂಕಿನ 18 ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
20 ಬಸ್‍ಗಳಲ್ಲಿ 700 ವಿದ್ಯಾರ್ಥಿಗಳು ಬಕ್ಕಚೌಡಿ, ಬೆಳ್ಳೂರ, ಆಣದೂರು, ಸಿಕೇನಪುರ, ಆಣದೂರವಾಡಿ, ಕಮಲಾಪುರ, ಕೊಳಾರ(ಬಿ), ಅತಿವಾಳ, ಸಂಗೋಳಗಿ, ನೆಲವಾಡ, ಬಾವಗಿ, ಸಿರ್ಸಿ(ಎ), ಕಾಶೆಂಪುರ, ಮಂದಕನಳ್ಳಿ, ಕಂಗನಕೋಟ, ಶಮಶೀರನಗರ ಹಾಗೂ ಕಮಠಾಣ ಗ್ರಾಮಗಳಿಗೆ ತೆರಳಿ, ಮಂದಿರ, ಮಸೀದಿ, ಚರ್ಚ್, ಆಸ್ಪತ್ರೆ, ಶಾಲೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಿದರು.
ವೈಯಕ್ತಿಕ ಸ್ವಚ್ಛತೆ, ಮನೆ, ಓಣಿ ಹಾಗೂ ಗ್ರಾಮ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನೂ ಮೂಡಿಸಿದರು. ಶ್ರಮದಾನದ ನಂತರ ಸ್ವಚ್ಛತೆಗಾಗಿ ಸ್ವಂತ ಹಣದಲ್ಲಿ ಖರೀದಿಸಿ ತಂದಿದ್ದ ಕಿಟ್‍ಗಳನ್ನು ಆಯಾ ಪ್ರಾರ್ಥನಾ ಮಂದಿರ, ಆಸ್ಪತ್ರೆ ಹಾಗೂ ಶಾಲೆಗಳ ಮುಖ್ಯಸ್ಥರಿಗೆ ಒಪ್ಪಿಸಿದರು.


ಶಾಹೀನ್ ಕಾಲೇಜು ವಿದ್ಯಾರ್ಥಿಗಳು ಪ್ರತಿ ವರ್ಷ ಸ್ವಂತ ಹಣದಲ್ಲಿ ಸ್ವಚ್ಛತಾ ಕಿಟ್ ಖರೀದಿಸಿ, ಪ್ರಾರ್ಥನಾ ಮಂದಿರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತ ಬಂದಿದ್ದಾರೆ. ಈ ಬಾರಿ ಸ್ವಚ್ಛತೆಯೇ ಸೇವೆ ಪಾಕ್ಷಿಕ ಪ್ರಯುಕ್ತ ಸೆ. 15 ರಿಂದ ಅಕ್ಟೋಬರ್ 2 ರ ವರೆಗೆ ಜಿಲ್ಲಾ ಆಡಳಿತ ನಡೆಸುತ್ತಿರುವ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿ, 18 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.


ಜಿಲ್ಲಾಧಿಕಾರಿ ಮೆಚ್ಚುಗೆ:
ಸಾಮಾಜಿಕ ಚಟುವಟಿಕೆ ಭಾಗವಾಗಿ ಸ್ವಂತ ಖರ್ಚಿನಲ್ಲಿ 18 ಗ್ರಾಮಗಳಲ್ಲಿ ಸ್ವಚ್ಛತೆ ಕೈಗೊಂಡ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ಕಾರ್ಯವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಶ್ಲಾಘಿಸಿದ್ದಾರೆ.
ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಮಿಕೊಂಡಿದ್ದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಹೀನ್ ವಿದ್ಯಾರ್ಥಿಗಳ ಗ್ರಾಮ ಸ್ವಚ್ಛತಾ ಕಾರ್ಯ ಪ್ರಸಂಶನೀಯ ಎಂದು ಹೇಳಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರ ಪ್ರೇರಣೆಯಿಂದಾಗಿ ವಿದ್ಯಾರ್ಥಿಗಳು ಸಾಮಾಜಿಕ

ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಟಿ.ಎಂ. ಮಚ್ಚೆ, ಶಿವಕುಮಾರ ಕಟ್ಟೆ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ, ಜಗನ್ನಾಥ ಮೂರ್ತಿ, ರಾಜಶೇಖರ ಮಠ, ಬಾಬುರಾವ್ ದಾನಿ, ವಿಜಯಕುಮಾರ ಸೋನಾರೆ, ಭಾರತಿ ವಸ್ತ್ರದ್, ಜಯದೇವಿ ಯದಲಾಪುರೆ, ವಿದ್ಯಾವತಿ ಬಲ್ಲೂರ, ಪಾರ್ವತಿ ಸೋನಾರೆ, ಜಗನ್ನಾಥ ಕಮಲಾಪುರೆ, ಜಗನ್ನಾಥ ಶಿವಯೋಗಿ, ವೀರಶೆಟ್ಟಿ ಚನಶೆಟ್ಟಿ, ರಾಜಕುಮಾರ ಮಣಗೇರಿ, ರಮೇಶ ಬಿಡವೆ ಇದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿದರು. ಶಾಹೀನ್ ಕಾಲೇಜು ಪ್ರಾಚಾರ್ಯ ಖಾಜಾ ಪಟೇಲ್ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.