ADVERTISEMENT

ಬೀದರ್: ಅಂಗವಿಕಲರ ಮೌಲ್ಯಮಾಪನ ಶಿಬಿರ ಆರಂಭ

ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 13:55 IST
Last Updated 17 ಸೆಪ್ಟೆಂಬರ್ 2021, 13:55 IST
ಬೀದರ್‌ನ ಶಾಹೀನ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಅಂಗವಿಕಲರ ಮೌಲ್ಯಮಾಪನ ಶಿಬಿರವನ್ನು ಶಾಸಕ ರಹೀಂಖಾನ್ ಸಸಿಗೆ ನೀರೆರೆದು ಉದ್ಘಾಟಿಸಿದರು
ಬೀದರ್‌ನ ಶಾಹೀನ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಅಂಗವಿಕಲರ ಮೌಲ್ಯಮಾಪನ ಶಿಬಿರವನ್ನು ಶಾಸಕ ರಹೀಂಖಾನ್ ಸಸಿಗೆ ನೀರೆರೆದು ಉದ್ಘಾಟಿಸಿದರು   

ಬೀದರ್: ಅಂಗವಿಕಲರಿಗೆ ಸಾಧನ, ಸಲಕರಣೆ ವಿತರಣೆಗಾಗಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಧೀನದ ಪಂಡಿತ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ಸಿಕಂದರಾಬಾದ್‍ನ ದಕ್ಷಿಣ ಪ್ರಾದೇಶಿಕ ಕೇಂದ್ರದ ವತಿಯಿಂದ ಮೂರು ದಿನಗಳ ಮೌಲ್ಯಮಾಪನ ಶಿಬಿರ ಇಲ್ಲಿಯ ಶಹಾಪುರ ಗೇಟ್ ಬಳಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆರಂಭಗೊಂಡಿತು.

ಸಸಿಗೆ ನೀರೆರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ರಹೀಂಖಾನ್ ಅವರು, ಅಂಗವಿಕಲರಿಗೆ ಪಂಡಿತ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ವತಿಯಿಂದ ಅಗತ್ಯ ಸಾಧನ, ಸಕಲರಣೆಗಳನ್ನು ದೊರಕಿಸಿ ಕೊಡಲು ಶಾಹೀನ್ ಸೇರಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಿಬಿರ ಸಂಘಟಿಸಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ಅಂಗವಿಕಲರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ಹೈದರಾಬಾದ್ ಹಾಗೂ ನವದೆಹಲಿಯ ನಾಲ್ವರು ಪರಿಣಿತ ವೈದ್ಯರು ಶಿಬಿರದಲ್ಲಿ ಅಂಗವಿಕಲರ ಮಾಲ್ಯಮಾಪನ ಮಾಡಲಿದ್ದಾರೆ. ಶಿಬಿರ 19 ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

ಮೌಲ್ಯಮಾಪನಕ್ಕೆ ಒಳಗಾದವರಿಗೆ ಪಂಡಿತ ದೀನದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯು ಬರುವ ದಿನಗಳಲ್ಲಿ ತ್ರಿಚಕ್ರ ಸೈಕಲ್, ಮಡಚುವ ಗಾಲಿ ಕುರ್ಚಿ, ಸಹಾಯಕ ಊರುಗೋಲು, ಮೊಣಕೈ ಊರುಗೋಲು, ಮಡಚುವ ವಾಕರ್, ರೊಲೇಟರ್(ಬಿ), ಸಿ.ಪಿ. ಕುರ್ಚಿ, ಎಂ.ಆರ್. ಕಿಟ್, ಸ್ಮಾರ್ಟ್ ಕೇನ್ (ದೃಷ್ಟಿಹೀನ), ಎಡಿಎಲ್ ಕಿಟ್ ಹಾಗೂ ಕುಷ್ಠರೋಗ ಬಾಧಿತರಿಗೆ ಕೃತಕ ಅಂಗ ಹಾಗೂ ಕ್ಯಾಲಿಪರ್ ಸೇರಿ 12 ವಿಧದ ಸಾಧನ, ಸಲಕರಣೆಗಳನ್ನು ವಿತರಿಸಲಿದೆ ಎಂದು ಹೇಳಿದರು.

ಜಿಲ್ಲಾ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಡಾ. ಮಕ್ಸೂದ್ ಚಂದಾ, ಬಾಬು ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.