ADVERTISEMENT

ಲಿಂಗಾಯತ ಸ್ವತಂತ್ರ ಧರ್ಮ ಶಿಫಾರಸಿನಿಂದ ಕಾಂಗ್ರೆಸ್ ಸೋತಿಲ್ಲ

ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:46 IST
Last Updated 19 ಅಕ್ಟೋಬರ್ 2018, 19:46 IST
ಶ್ರೀಕಾಂತ ಸ್ವಾಮಿ
ಶ್ರೀಕಾಂತ ಸ್ವಾಮಿ   

ಬೀದರ್‌: ‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಶಿಫಾರಸು ಮಾಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿಕೆ ನೀಡಿರುವುದು ಸರಿಯಲ್ಲ. ಸ್ವತಂತ್ರ ಧರ್ಮ ಶಿಫಾರಸಿನಿಂದ ಕಾಂಗ್ರೆಸ್ ಸೋತಿಲ್ಲ. ಅದರಿಂದ ಕಾಂಗ್ರೆಸ್ ಬಲ ಹೆಚ್ಚಾಗಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ಹೇಳಿದ್ದಾರೆ.

‘ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಸಂಖ್ಯಾ ಬಲ ಇದೆ. ಬೀದರ್, ಕಲಬುರ್ಗಿ, ರಾಯಚೂರು, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಅಧಿಕ ಸಂಖ್ಯೆಯಲ್ಲಿ ವಿಧಾನಸಭೆಗೆ ಚುನಾಯಿತರಾಗಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಅಧಿಕ ಸಂಖ್ಯೆಯಲ್ಲಿದ್ದರೂ ಸೋಲಿಗೆ ಕಾರಣ ಏನು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಹಿಂದೆ ಡಿಕೆಶಿ ಅವರು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದರು. ಸಂಪುಟ ಸಭೆಯಲ್ಲಿ ಕೂಡ ಶಾಮನೂರು ಮತ್ತು ಖಂಡ್ರೆ ಅವರ ಮನವೊಲಿಸಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸರ್ಕಾರ ತಪ್ಪು ಮಾಡಿದ್ದರೆ ಡಿಕೆಶಿ ಅವರು ವೈಯಕ್ತಿಕವಾಗಿ ಏಕೆ ಕ್ಷಮೆ ಕೇಳಬೇಕು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ವೀರಶೈವ ಮತ್ತು ಲಿಂಗಾಯತ ಜಗಳ ಮುಂದುವರಿದರೆ ಲಿಂಗಾಯತ ನಾಯಕರನ್ನು ರಾಜಕೀಯವಾಗಿ ತುಳಿಯಬಹುದು ಎನ್ನುವುದು ಅನೇಕರ ಲೆಕ್ಕಾಚಾರವಾಗಿದೆ. ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ ನಾಯಕರನ್ನು ತುಳಿಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ವೀರಶೈವ ಮಹಾಸಭಾ ಮತ್ತು ಪಂಚಾಚಾರ್ಯರು ಕಾಂಗ್ರೆಸ್ ಸೋಲಿಸಿ ಎಂದು ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು ಎನ್ನವುದನ್ನು ಯಾರೂ ಮರೆಯಬಾರದು’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ನ ಹಿರಿಯ ಮುಖಂಡ ಲಿಂಗಾಯತರಿಗೆ ಅವಮಾನವಾಗುವಂತಹ ಹೇಳಿಕೆ ಕೊಡುತ್ತಿರುವುದು ಸರಿಯಲ್ಲ. ಇದರಿಂದ ಪಕ್ಷಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಲಿದೆ. ಧರ್ಮದ ವಿಷಯದಲ್ಲಿ ಯಾವ ಮುಖಂಡರೂ ಹೇಳಿಕೆ ನೀಡದಂತೆ ಪಕ್ಷದ ವರಿಷ್ಠರು ತಾಕೀತು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.