ADVERTISEMENT

ಸಚಿವರಿಂದ ಬೆಳೆ ಹಾನಿ ಪರಿಶೀಲನೆ

ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ: ಭರವಸೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 1:47 IST
Last Updated 2 ಅಕ್ಟೋಬರ್ 2021, 1:47 IST

ಜನವಾಡ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಬೀದರ್ ತಾಲ್ಲೂಕಿನ ಅಲ್ಲಾಪುರ ಹಾಗೂ ನೇಮತಾಬಾದ್ ಗ್ರಾಮಗಳ ಪ್ರದೇಶದಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿಯನ್ನು ಶುಕ್ರವಾರ ಪರಿಶೀಲಿಸಿದರು.

ತಮ್ಮ 10 ಎಕರೆ ಪ್ರದೇಶದಲ್ಲಿನ ಸೋಯಾಬೀನ್, ತೊಗರಿ ಬೆಳೆ ಮಳೆಯಿಂದ ನಷ್ಟವಾಗಿದೆ. ಈ ವರ್ಷ ಬೆಳೆ ವಿಮೆ ಕೂಡ ಮಾಡಿಸಿಲ್ಲ ಎಂದು ಅಲ್ಲಾಪುರದ ರೈತ ಬಸಪ್ಪ ಸಚಿವರ ಎದುರು ಅಳಲು ತೋಡಿಕೊಂಡರು.

ಮಳೆ ನೀರು ನುಗ್ಗಿ ತಮ್ಮ ಹೊಲದಲ್ಲಿನ ಸೋಯಾಬೀನ್ ಹಾಗೂ ತೊಗರಿ ಬೆಳೆಗಳು ಹಾಳಾಗಿವೆ ಎಂದು ನೇಮತಾಬಾದ್ ಗ್ರಾಮದ ರೈತ ಶ್ರೀಕಾಂತ ಹೇಳಿದರು.

ADVERTISEMENT

ಪ್ರಾಥಮಿಕ ವರದಿ ಪ್ರಕಾರ ಅಲ್ಲಾಪುರ ಪ್ರದೇಶದಲ್ಲಿ 225 ಹೆಕ್ಟೇರ್ ಹಾಗೂ ನೇಮತಾಬಾದ್ ಪ್ರದೇಶದಲ್ಲಿ 340 ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮಾಹಿತಿ ನೀಡಿದರು.

ಕಳೆದ ವರ್ಷದ ಬೆಳೆ ವಿಮೆ ಪರಿಹಾರ ದೊರಕಿಲ್ಲ ಎಂದು ರೈತರು ಗಮನ ಸೆಳೆದಾಗ, ಬೆಳೆ ವಿಮೆ ಪರಿಹಾರ ಲಭಿಸದಿರುವ ಬಗ್ಗೆ ಆನ್‍ಲೈನ್‍ನಲ್ಲಿ ದೂರು ಸಲ್ಲಿಸುವ ಕುರಿತು ಅಧಿಕಾರಿಗಳಿಂದ ರೈತರಿಗೆ ಮಾಹಿತಿ ಕೊಡಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಈವರೆಗೆ ಅಂದಾಜು 54 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿರುವ ಮಾಹಿತಿ ಸರ್ಕಾರಕ್ಕೆ ನೀಡಲಾಗಿದೆ ಎಂದು ಸಚಿವ ಚವಾಣ್ ತಿಳಿಸಿದರು.

ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್, ತಹಶೀಲ್ದಾರ್ ಶಕೀಲ್, ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ರವೀಂದ್ರಕುಮಾರ ಭೂರೆ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.