ADVERTISEMENT

ಡಿಸಿಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಿಡುಗಡೆ

ಮೊಬೈಲ್, ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗೆ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 12:58 IST
Last Updated 29 ಏಪ್ರಿಲ್ 2022, 12:58 IST
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಬೀದರ್‌ನ ಬ್ಯಾಂಕ್ ಕೇಂದ್ರ ಕಚೇರಿಯ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಶುಕ್ರವಾರ ಗ್ರಾಹಕರ ಸೇವೆಗೆ ಬ್ಯಾಂಕ್‍ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಿಡುಗಡೆ ಮಾಡಿದರು
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಬೀದರ್‌ನ ಬ್ಯಾಂಕ್ ಕೇಂದ್ರ ಕಚೇರಿಯ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಶುಕ್ರವಾರ ಗ್ರಾಹಕರ ಸೇವೆಗೆ ಬ್ಯಾಂಕ್‍ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಿಡುಗಡೆ ಮಾಡಿದರು   

ಬೀದರ್: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಅನ್ನು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದರು.

ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗೂ ಚಾಲನೆ ನೀಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸರಿಸಮನಾಗಿ ಗ್ರಾಹಕರಿಗೆ ತಂತ್ರಾಂಶ ಆಧಾರಿತ ಸಕಲ ಸೇವೆಗಳನ್ನು ಕಲ್ಪಿಸುವುದೇ ಬ್ಯಾಂಕ್ ಗುರಿಯಾಗಿದೆ ಎಂದು ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ADVERTISEMENT

ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್‍ನಿಂದ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಆಗಲಿದೆ. ಬರುವ ದಿನಗಳಲ್ಲಿ ಯುಪಿಐ, ಐಎಂಪಿಎಸ್, ಬಿಬಿಪಿಎಸ್, ಗೂಗಲ್ ಪೇ, ಫೋನ್ ಪೇ ಮೊದಲಾದ ಸೇವೆಗಳನ್ನೂ ಒದಗಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಕೋರ್ ಬ್ಯಾಂಕಿಂಗ್ ಸಿಸ್ಟಮ್ ಅಡಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಈಗಾಗಲೇ ಆರ್‍ಟಿಜಿಎಸ್, ನೆಫ್ಟ್, ಮೊಬೈಲ್ ಬ್ಯಾಂಕಿಂಗ್ ವ್ಯಾನ್, ಎಟಿಎಂ, ಕಿಸಾನ್ ರುಪೆ ಡೆಬಿಟ್ ಕಾರ್ಡ್, ಎಸ್‍ಎಂಎಸ್ ಸೇರಿ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಹೇಳಿದರು.

ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಅತ್ಯಾಧುನಿಕ ಬ್ಯಾಂಕ್ ಸೌಲಭ್ಯಗಳ ಕುರಿತು ಬೆಂಗಳೂರಿನ ಜೇನಿತ್ ಸಾಫ್ಟ್‍ವೇರ್ ಪ್ರೈವೇಟ್ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕ ನಂದಕುಮಾರ ಮಾತನಾಡಿದರು.

ಜಿಲ್ಲೆಯ ಆಯ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ, ಬ್ಯಾಂಕ್‍ನ ಪಿಗ್ಮಿ ಏಜೆಂಟರಿಗೆ ಪಿಗ್ಮಿ ಸಂಗ್ರಹ ಯಂತ್ರ ಹಾಗೂ ಸಹಾಯಕ ಅಭಿವೃದ್ಧಿ ಅಧಿಕಾರಿಗಳಿಗೆ ಮೊಬೈಲ್ ವಿತರಿಸಲಾಯಿತು.

ಬ್ಯಾಂಕ್ ನಿರ್ದೇಶಕರಾದ ರಾಚಪ್ಪ ಪಾಟೀಲ, ಬಸವರಾಜ ಹೆಬ್ಬಾಳೆ, ವಿಜಯಕುಮಾರ ಎಸ್. ಪಾಟೀಲ ಗಾದಗಿ, ಸಂಗಮೇಶ ಪಾಟೀಲ, ಪರಮೇಶ್ವರ ಮಗಟೆ, ಬಸವರಾಜ ಗೋಣೆ, ಹಣಮಂತರಾವ್ ಪಾಟೀಲ, ಶಿವಬಸಪ್ಪ ತಗಾರೆ, ಬೆಂಗಳೂರಿನ ಅಲಾಕ್ರೇಟಿ ನೆಟ್‍ವರ್ಕ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ ಸಂದೀಪ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಾಮರಾವ್, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ಉಪ ಪ್ರಧಾನ ವ್ಯವಸ್ಥಾಪಕರಾದ ಪಂಢರಿ ರೆಡ್ಡಿ, ಅನಿಲ ಪಾಟೀಲ, ಸದಾಶಿವ ಪಾಟೀಲ, ಬಸವರಾಜ ಕಲ್ಯಾಣ, ದೀನದಯಾಳ್ ಮನ್ನಳ್ಳಿ, ರಾಜಶೇಖರಯ್ಯ, ಪ್ರಮುಖರಾದ ಶಾಂತಕುಮಾರ ಮುದಾಳೆ, ನಂದಕುಮಾರ ಜೋಶಿ, ಮಾಧವರಾವ್ ಪಾಟೀಲ ಉಪಸ್ಥಿತರಿದ್ದರು.

ಶ್ರೀಧರ ಕುಲಕರ್ಣಿ ನಿರೂಪಿಸಿದರು. ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು.

ದೇಶದ ಗಮನ ಸೆಳೆದ ಬ್ಯಾಂಕ್
ಬೀದರ್:
ಡಿಸಿಸಿ ಬ್ಯಾಂಕ್ ತನ್ನ ಅತ್ಯುತ್ತಮ ಕಾರ್ಯನಿರ್ವಹಣೆಯಿಂದಾಗಿ ಇಡೀ ದೇಶದ ಗಮನ ಸೆಳೆದಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ದೇಶ, ವಿದೇಶಗಳ ಪ್ರತಿನಿಧಿಗಳು ಬ್ಯಾಂಕ್, ಬ್ಯಾಂಕ್ ಅಧೀನದ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ದೂರದೃಷ್ಟಿಯ ಫಲವಾಗಿ ಬ್ಯಾಂಕ್ ಬೃಹದಾಕಾರವಾಗಿ ಬೆಳೆದಿದೆ. ರೈತರು, ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕ್ ದುಡಿಯುವ ಬಂಡವಾಳ ರೂ. 4,094.48 ಕೋಟಿ ಹಾಗೂ ಠೇವಣಿ ರೂ. 2,230.77 ಕೋಟಿ ಆಗಿದೆ ಎಂದು ಹೇಳಿದರು.

ಎಸ್‍ಎಚ್‍ಜಿ: ₹ 1 ಸಾವಿರ ಕೋಟಿ ಸಾಲ ಗುರಿ
ಬೀದರ್:
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಸ್‍ಎಚ್‍ಜಿಗಳಿಗೆ ₹ 1 ಸಾವಿರ ಕೋಟಿ ಸಾಲ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದರು.

2021-22ನೇ ಸಾಲಿನಲ್ಲಿ ಸ್ವಸಹಾಯ ಗುಂಪುಗಳಿಗೆ ₹. 500 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಆದರೆ, ₹ 507 ಕೋಟಿ ಸಾಲ ವಿತರಿಸಲಾಗಿದೆ. ಎಸ್‍ಎಚ್‍ಜಿಗೆ ಇಷ್ಟೊಂದು ದೊಡ್ಡ ಮೊತ್ತದ ಸಾಲ ವಿತರಿಸಿದ ಮೊದಲ ಬ್ಯಾಂಕ್ ಎನ್ನುವ ಹೆಗ್ಗಳಿಗೆ ಬ್ಯಾಂಕ್‍ನದ್ದಾಗಿದೆ ಎಂದರು.

ಸ್ವಸಹಾಯ ಗುಂಪುಗಳ ಮೂಲಕ ಜಿಲ್ಲೆಯಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತಗೊಳಿಸಿದ ಶ್ರೇಯ ಬ್ಯಾಂಕ್‍ಗೆ ಸಲ್ಲುತ್ತದೆ ಎಂದು ಹೇಳಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2016 ರಿಂದ ಈವರೆಗೆ ಜಿಲ್ಲೆಯ ರೈತರಿಗೆ ಒಟ್ಟು ₹ 419 ಕೋಟಿ ಪರಿಹಾರ ದೊರಕಿದೆ ಎಂದು ತಿಳಿಸಿದರು.

ಬ್ಯಾಂಕ್ ಪ್ಯಾಕ್ಸ್‍ಗಳ ಮೂಲಕ ರೈತರ ಮನೆ ಬಾಗಿಲಿಗೆ ರಸಗೊಬ್ಬರ ಪೂರೈಸಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.