ADVERTISEMENT

ಕರ್ನಾಟಕದ ಕಲ್ಯಾಣವೇ ಬಿಜೆಪಿ ಧ್ಯೇಯ: ನಳಿನ್‌ಕುಮಾರ್‌ ಕಟೀಲ್‌

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 14:51 IST
Last Updated 9 ಸೆಪ್ಟೆಂಬರ್ 2019, 14:51 IST
ಬೀದರ್‌ನಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಸನ್ಮಾನಿಸಲಾಯಿತು   

ಬೀದರ್: ‘ಮುಖ್ಯಮಂತ್ರಿ ಯಡಿಯೂರಪ್ಪನವರು ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಘೋಷಣೆ ಮಾಡಿದಂತೆ ಇಡೀ ಕರ್ನಾಟಕದ ಕಲ್ಯಾಣ ಮಾಡುವುದೇ ಬಿಜೆಪಿಯ ಧ್ಯೇಯವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ನಗರದ ಎಸ್‌ಆರ್‌ಎಸ್‌ ಫಂಕ್ಷನ್‌ ಹಾಲ್‌ನಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ನನಗೆ ಬಸವಣ್ಣನ ವಿಗ್ರಹವನ್ನು ನೀಡಿ ಬಸವಣ್ಣನವರ ಕಾಯಕ ತತ್ವದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಪ್ರೇರಣೆ ನೀಡಿದ್ದೀರಿ. ನಾನೊಬ್ಬ ಸಣ್ಣ ಕಾರ್ಯಕರ್ತ. ನನ್ನ ಮೇಲೆ ನಂಬಿಕೆಯಿಟ್ಟು ಹಿರಿಯರು ನೀಡಿದ ಈ ದೊಡ್ಡ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವೆ’ ಎಂದು ಭರವಸೆ ನೀಡಿದರು.

ADVERTISEMENT

‘ನಾನು 2014 ರಲ್ಲಿ ರಾಜಕೀಯ ಪ್ರವೇಶಿಸಿದ್ದೇನೆ. ಆವತ್ತಿನಿಂದಲೂ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಸೋನಿಯಾ ಗಾಂಧಿ ಹಾಗೂ ಅವರ ಮಗ ರಾಹುಲ್ ಗಾಂಧಿ ಮಾತ್ರ ಇದ್ದಾರೆ. ಆದರೆ ಬಿಜೆಪಿಯಲ್ಲಿ ಈವರೆಗೆ ನಾಲ್ವರು ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ್ದಾರೆ. ಇದೇ ಬಿಜೆಪಿ ಸಿದ್ಧಾಂತ’ ಎಂದು ಹೇಳಿದರು.

‘ಈಗ ಪ್ರಧಾನಿ ನರೇಂದ್ರ ಮೋದಿ ಅವರ ಸಬ್‌ಕಾ ಸಾಥ್ ಸಬ್‌ ಕಾ ವಿಕಾಸ ಘೋಷವಾಕ್ಯದಡಿ ಭಾರತ ಸಾಗುತ್ತಿದೆ. ಇಲ್ಲಿ ಜಾತಿ, ಹಣ ಹಾಗೂ ತೋಳಬಲಕ್ಕೆ ಅವಕಾಶ ಇಲ್ಲ’ ಎಂದು ತಿಳಿಸಿದರು.

‘ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿಲ್ಲ. ಅರ್ಥ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಭಯೋತ್ಪಾದನೆ ಕೃತ್ಯಗಳು ಕಡಿಮೆಯಾಗಿವೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಿಯಂತ್ರಿಸುವ ಪ್ರಯತ್ನ ನಿರಂತರ ನಡೆದಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮುಂದಿನ ಅವಧಿಗೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ದೇಶದ ಎಲ್ಲ ನಾಗರಿಕರೂ ಬಿಜೆಪಿ ಸದಸ್ಯತ್ವ ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸದಸ್ಯತ್ವ ಮಾಡಿಸಬೇಕು’ ಎಂದು ತಿಳಿಸಿದರು.
ಸಂಸದ ಭಗವಂತ ಖೂಬಾ ಮಾತನಾಡಿ, ‘ರಾಜ್ಯದಲ್ಲಿ ಸದ್ಯ ಹಳೆ ಬೇರು, ಹೊಸ ಚಿಗುರು ಸೇರಿದಂತಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಳೆ ಬೇರು ಹಾಗೂ ನಳೀನ್‌ಕುಮಾರ ಕಟೀಲ್‌ ಹೊಸ ಬೇರು ಚಿಗುರು ಇದ್ದಂತೆ’ ಎಂದು ಹೇಳಿದರು.
ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಮಾತನಾಡಿ, ‘ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದೆ. ಅದಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸುವೆ. ಜಿಲ್ಲೆಯ ಅಭಿವೃದ್ಧಿಗೆ ದಿನದ 24 ಗಂಟೆಗಳ ಕಾಲ ಜನರ ಸೇವೆ ಸಲ್ಲಿಸುವೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ಅರುಣಕುಮಾರ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಮಾಜಿ ಸದಸ್ಯ ಅಮರನಾಥ ಪಾಟೀಲ, ಮಾಜಿ ಶಾಸಕ ಸುಭಾಷ ಕಲ್ಲೂರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಜಿ.ಪಂ. ಮಾಜಿ ಸದಸ್ಯ ಡಿ.ಕೆ. ಸಿದ್ರಾಮ, ಮುಖಂಡರಾದ ಬಾಬುರಾವ್ ಮದಕಟ್ಟಿ, ಬಾಬು ವಾಲಿ, ಈಶ್ವರ ಸಿಂಗ್‌ ಠಾಕೂರ, ಶಿವರಾಜ್ ಗಂದಗೆ, ಶಕುಂತಲಾ ಬೆಲ್ದಾಳೆ, ಗುರುನಾಥ ಜ್ಯಾಂತಿಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.