ADVERTISEMENT

ಬೀದರ್: ರೋಟರಿಯಿಂದ ಡಯಾಲಿಸಿಸ್ ಕೇಂದ್ರ

ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಪ್ರಕಾಶ ಟೊಣ್ಣೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 11:57 IST
Last Updated 23 ಜುಲೈ 2021, 11:57 IST
ಬೀದರ್‌ನ ಘಾಳೆ ಕನ್ವೆನ್ಶನ್ ಹಾಲ್‍ನಲ್ಲಿ ನಡೆದ ರೋಟರಿ ಕ್ಲಬ್ ಬೀದರ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕ್ಲಬ್ ನೂತನ ಅಧ್ಯಕ್ಷ ಪ್ರಕಾಶ ಟೊಣ್ಣೆ ಅವರಿಗೆ ಸದಸ್ಯರು ಪುಷ್ಪಗುಚ್ಛ ನೀಡಿ ಶುಭ ಕೋರಿದರು
ಬೀದರ್‌ನ ಘಾಳೆ ಕನ್ವೆನ್ಶನ್ ಹಾಲ್‍ನಲ್ಲಿ ನಡೆದ ರೋಟರಿ ಕ್ಲಬ್ ಬೀದರ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕ್ಲಬ್ ನೂತನ ಅಧ್ಯಕ್ಷ ಪ್ರಕಾಶ ಟೊಣ್ಣೆ ಅವರಿಗೆ ಸದಸ್ಯರು ಪುಷ್ಪಗುಚ್ಛ ನೀಡಿ ಶುಭ ಕೋರಿದರು   

ಬೀದರ್: ’ಬಡ ರೋಗಿಗಳಿಗೆ ನೆರವಾಗಲು ಎಲ್ಲ ರೋಟರಿ ಕ್ಲಬ್‍ಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಡಯಾಲಿಸಿಸ್‌ ಕೇಂದ್ರ ಅಥವಾ ರಕ್ತ ನಿಧಿ ಕೇಂದ್ರ ಆರಂಭಿಸುವ ಉದ್ದೇಶ ಇದೆ’ ಎಂದು ರೋಟರಿ ಕ್ಲಬ್ ಬೀದರ್ ನೂತನ ಅಧ್ಯಕ್ಷ ಪ್ರಕಾಶ ಟೊಣ್ಣೆ ಹೇಳಿದರು.

ನಗರದ ಘಾಳೆ ಫಂಕ್ಷನ್ ಹಾಲ್‍ನಲ್ಲಿ ನಡೆದ ಕ್ಲಬ್‍ನ 2021-22ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಯೋಜನೆ ಕುರಿತು ಜಿಲ್ಲೆಯ ಇತರೆ ರೋಟರಿ ಕ್ಲಬ್‍ಗಳ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಲಿರುವ ಕ್ಲಬ್ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಬರುವ ದಿನಗಳಲ್ಲಿಯೂ ಶಿಕ್ಷಣ, ಆರೋಗ್ಯ, ಪರಿಸರ ಮೊದಲಾದ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಲಿದೆ. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳಿಗೆ ಬೆಂಚ್, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಿತರಿಸಲಿದೆ’ ಎಂದು ಹೇಳಿದರು.

ADVERTISEMENT

‘ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ ಭಾರತೀಯ ಮೂಲದ ಶೇಖರ ಮೆಹ್ತಾ ಅಧ್ಯಕ್ಷರಾಗಿದ್ದಾರೆ. ಅವರು ಸಂಸ್ಥೆ ಸದಸ್ಯತ್ವ ಹೆಚ್ಚಳದ ಗುರಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲೂ ಕ್ಲಬ್‍ನಿಂದ ಅಧಿಕ ಸದಸ್ಯತ್ವ ನೋಂದಣಿ ಮಾಡಿಸಲಾಗುವುದು’ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ‘ರೋಟರಿ ಕ್ಲಬ್ ಬೀದರ್ ಸಮಾಜಕ್ಕೆ ಉಪಕಾರಿ ಆಗುವಂತಹ ಕಾರ್ಯಗಳನ್ನು ಕೈಗೊಳ್ಳುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಮಾಜಿ ಗವರ್ನರ್ ಕೆ.ಸಿ.ಸೇನನ್, ಜಿಲ್ಲಾ ಕಾರ್ಯದರ್ಶಿ ಶಿವಶಂಕರ ಕಾಮಶೆಟ್ಟಿ, ಸಂಸ್ಥೆಯ ಸೆವೆನ್ ಏರಿಯಾಸ್ ಆಫ್ ಫೋಕಸ್ ಅಧ್ಯಕ್ಷ ಬಸವರಾಜ ಧನ್ನೂರ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಕ್ಲಬ್ ಉಪಾಧ್ಯಕ್ಷ ಸೋಮಶೇಖರ ಪಾಟೀಲ, ನಿಕಟಪೂರ್ವ ಕಾರ್ಯದರ್ಶಿ ರಂಜೀತ್ ಪಾಟೀಲ, ಬಿಎಸ್‍ಎನ್‍ಎಲ್ ಉಪ ಪ್ರಧಾನ ವ್ಯವಸ್ಥಾಪಕಿ ಅನಿತಾ ಪಟೀಲ, ಪದಗ್ರಹಣ ಅಧಿಕಾರಿ ಅಮರನಾಥ ಡೊಳ್ಳಿ, ಮಂಜುಳಾ ಮೂಲಗೆ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಬೀದರ್ ನಿಕಟಪೂರ್ವ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಸ್ವಾಗತಿಸಿದರು. ರವಿ ಮೂಲಗೆ ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ಅನಿಲಕುಮಾರ ಔರಾದೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.