ADVERTISEMENT

ಸ್ವಾಭಿಮಾನಿಗಳಿಗೆ ಪ್ರತಿಷ್ಠೆಯ ಚುನಾವಣೆ: ಮತದಾರರಿಗೆ ಮಲ್ಲಿಕಾರ್ಜುನ ಖೂಬಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 3:58 IST
Last Updated 16 ಏಪ್ರಿಲ್ 2021, 3:58 IST
ಬಸವಕಲ್ಯಾಣದಲ್ಲಿ ಗುರುವಾರ ಉಪಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನ ನಡೆದ ಪ್ರಚಾರ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು
ಬಸವಕಲ್ಯಾಣದಲ್ಲಿ ಗುರುವಾರ ಉಪಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನ ನಡೆದ ಪ್ರಚಾರ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು   

ಬಸವಕಲ್ಯಾಣ: ‘ಬಿಜೆಪಿ ಸ್ಥಳೀಯರಾದ 16 ಆಕಾಂಕ್ಷಿಗಳನ್ನು ಕಡೆಗಣಿಸಿ ಹೊರಗಿನವರಿಗೆ ಟಿಕೆಟ್ ನೀಡಿದ್ದರಿಂದ ಇದು ಸ್ವಾಭಿಮಾನಿಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಪಕ್ಷೇತರನಾಗಿ ಸ್ಪರ್ಧಿಸಿರುವ ನನಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಕೇಳಿಕೊಂಡರು.

ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಗುರುವಾರ ನಡೆದ ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರದ ಮುಕ್ತಾಯದ ದಿನ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಅವರು ತಮ್ಮ ಅಭ್ಯರ್ಥಿಯ ಗೆಲುವಿಗೆ ಹರಸಾಹಸ ನಡೆಸಿದ್ದಾರೆ. ಹಣ ಹಂಚುತ್ತಿರುವ ಬಗ್ಗೆ ಆರೋಪಗಳಿವೆ. ಆದ್ದರಿಂದ ಯಾವುದಕ್ಕೂ ಧೃತಿಗೆಡದೆ ಧೈರ್ಯದಿಂದ ಮತದಾನ ಮಾಡಬೇಕು. ಇಲ್ಲಿನ ಜನರ ಶಕ್ತಿ ಏನೆಂಬುದನ್ನು ತೋರಿಸಿ ಕೊಡಬೇಕು. ನಾನು ಎರಡು ಸಲ ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ವಿಕಾಸ ಕೈಗೊಂಡಿದ್ದೇನೆ. ಕಳೆದ ಸಲ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಜೆಡಿಎಸ್ ಬಿಟ್ಟು ಬಿಜೆಪಿಗೆ ಬಂದೆ. ಆದರೆ, ಈ ಸಲ ಟಿಕೆಟ್ ನೀಡದೆ ಅನ್ಯಾಯ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಡಾ.ಪೃಥ್ವಿರಾಜ್ ಬಿರಾದಾರ ಮಾತನಾಡಿ, ‘ಬಸವಣ್ಣನವರ ನಾಡಿನ ವಿಕಾಸಕ್ಕಾಗಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ. ಮಲ್ಲಿಕಾರ್ಜುನ ಖೂಬಾ ಅವರಿಗೆ ಮತ ನೀಡಬೇಕು’ ಎಂದು ಕೇಳಿಕೊಂಡರು.

ಮುಖಂಡ ಶಿವಕುಮಾರ ಬಿರಾದಾರ ಮಾತನಾಡಿದರು.

ಮುಖಂಡರಾದ ಕಾಳಿದಾಸ ಜಾಧವ, ಬಸವೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ವೀರಣ್ಣ ಹಲಶೆಟ್ಟೆ, ಬಸವರಾಜ ಬಾಲಿಕಿಲೆ, ರಾಜಕುಮಾರ ಹೊಳಕುಂದೆ, ಜಗನ್ನಾಥ ಖೂಬಾ, ಸತೀಶ ಮೆಟಗೆ, ಉಮೇಶ ಶೀಲವಂತ, ತುಕಾರಾಮ ಕಾಳೇಕರ್, ಶರಖು ಗುದಗೆ, ಚೆನ್ನಪ್ಪ ರಾಜಾಪುರೆ, ರವೀಂದ್ರ ಗುಂಗೆ, ಪ್ರಕಾಶ ತೂಗಾವೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.