ADVERTISEMENT

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಕಡ್ಡಾಯ: ಎಂ.ನಾಗರಾಜು

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:51 IST
Last Updated 2 ಜುಲೈ 2025, 15:51 IST
ಬೀದರ್ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳ ಕುರಿತು ನಡೆದ ಸಭೆಯಲ್ಲಿ ಹಕ್ಕುಬಾಧ್ಯತೆ ಸಮಿತಿ ಅಧ್ಯಕ್ಷ ಎಂ.ನಾಗರಾಜು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಇದ್ದರು
ಬೀದರ್ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳ ಕುರಿತು ನಡೆದ ಸಭೆಯಲ್ಲಿ ಹಕ್ಕುಬಾಧ್ಯತೆ ಸಮಿತಿ ಅಧ್ಯಕ್ಷ ಎಂ.ನಾಗರಾಜು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಇದ್ದರು   

ಬೀದರ್: ‘ಜಿಲ್ಲೆಯ ಎಲ್ಲ ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಹಾಗೂ ಆಮಂತ್ರಣ ಪತ್ರಿಕೆಯಲ್ಲಿ ಕಡ್ಡಾಯವಾಗಿ ಶಿಷ್ಟಾಚಾರ ಪಾಲಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ, ಹಕ್ಕುಬಾಧ್ಯತೆ ಸಮಿತಿ ಅಧ್ಯಕ್ಷ ಎಂ.ನಾಗರಾಜು ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎಲ್ಲ ಶಾಸಕರಿಗೂ ಸಮಾನ ಗೌರವ ಕೊಡಬೇಕು. ವಿಧಾನಪರಿಷತ್ ಸದಸ್ಯರನ್ನು ಕಡೆಗಣಿಸುವುದು ಶಿಷ್ಟಾಚಾರದ ಉಲ್ಲಂಘನೆಯಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಮಿತಿಯು ಶಿಫಾರಸು’ ಮಾಡಲಾಗುವುದು ಎಂದರು.

ADVERTISEMENT

ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಆಹ್ವಾನ, ಆಮಂತ್ರಣ ಪತ್ರಿಕೆಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘಿಸಿದ ಅನೇಕ ಪ್ರಕರಣಗಳಿವೆ. ಈ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ವಿಚಾರಣೆ ನಡೆಸುವುದನ್ನು ತಪ್ಪಿಸಲು ನಾವೇ ಖುದ್ದಾಗಿ ಇಲ್ಲಿಗೆ ಬಂದು ಸಮಿತಿ ಸಭೆ ನಡೆಸುತ್ತಿದ್ದೇವೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ವಿಧಾನ ಪರಿಷತ್ ಸದಸ್ಯರಿಗೂ ಸಮಾನ ಗೌರವ ನೀಡಬೇಕು ಎಂದು ತಿಳಿಸಿದರು.

ಶಿಷ್ಟಾಚಾರ ಪಾಲನೆ ಕುರಿತು ಆರು ತಿಂಗಳಿಗೊಮ್ಮೆ ಎಲ್ಲ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಅಥವಾ ಕಾರ್ಯಾಗಾರ ಏರ್ಪಡಿಸಿ ಅರಿವು ಮೂಡಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿಷ್ಟಾಚಾರ ನಿರ್ವಹಣಾ ತಹಶೀಲ್ದಾರ್ ಹುದ್ದೆ ಖಾಲಿ ಇರುವುದರಿಂದ ಪ್ರಥಮ ದರ್ಜೆ ಸಹಾಯಕರು ನಿರ್ವಹಿಸುತ್ತಿದ್ದು ಅವರು ಜಾಗರೂಕತೆಯಿಂದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತಮಾಡಿ, ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆ, ಅಹವಾಲುಗಳನ್ನು ಕೇಳಲು ಕಚೇರಿಯ ಅಗತ್ಯತೆ ಇರುತ್ತದೆ. ವಿಧಾನ ಪರಿಷತ್ ಸದಸ್ಯರಿಗೆ ಅಧಿಕಾರಿಗಳು ಅಸಡ್ಡೆ ತೋರಿಸುವುದು ಸರಿಯಲ್ಲ, ಅಧಿಕಾರಿಗಳು ಜವಾಬ್ದಾರಿಯುತವಾಗಿ, ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಬೇಕು ಎಂದರು.

ಹಕ್ಕು ಬಾದ್ಯತೆ ಸಮಿತಿಯ ಸದಸ್ಯರಾದ ಡಾ.ತಳವಾರ, ಕೇಶವ ಪ್ರಸಾದ, ಭೀಮರಾವ್ ಪಾಟೀಲ, ಜಗದೇವ ಗುತ್ತೇದಾರ, ರಾಮಾಜಿರಾವ್ ಜಿಲ್ಲಾ ಪಂಚಾಯಿತಿ ಸಿಇಒ ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಕೊಠದಡಿ ನೀಡದಿರುವುದಕ್ಕೆ ಆಕ್ಷೇಪ

ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಅವರಿಗೆ ಕಳೆದ ಮೂರು ವರ್ಷಗಳಿಂದಲೂ ಕಚೇರಿ ಕೊಠಡಿ ನೀಡದೇ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಮಿತಿಯ ಸದಸ್ಯರು ಈವರೆಗೂ ಅವರಿಗೆ ಔರಾದ್‌ನಲ್ಲಿ ಕೊಠಡಿ ನೀಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸದ್ಯ ಕೊಠಡಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಔರಾದ್ ಪಟ್ಟಣದಲ್ಲಿ ಪುರಸಭೆ ಅನುದಾನದಲ್ಲಿ ಕೊಠಡಿ ಸಿದ್ಧಗೊಳ್ಳುತ್ತಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಜಿ.ಮೂಳೆ ಅವರಿಗೂ ಕೊಠಡಿಯ ಅಗತ್ಯವಿದೆ ಎಂದು ಅಧ್ಯಕ್ಷ ನಾಗರಾಜು ತಿಳಿಸಿದರು. ಬಸವಕಲ್ಯಾಣದ ಕೆಲ ಕಾಮಗಾರಿ ಉದ್ಘಾಟನೆಗಳಲ್ಲಿ ಅಧಿಕಾರಿಗಳು ತಮ್ಮನ್ನು ಆಹ್ವಾನಿಸದೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಜಿ.ಮೂಳೆ ತಮ್ಮ ಅಹವಾಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.