ಭಾಲ್ಕಿ: ತಾಲ್ಲೂಕಿನ ವಿವಿಧೆಡೆಯ ಅನ್ನದಾತರು ತಾವು ಬೆಳೆದ ಬೆಳೆಗಳನ್ನು ಕಾಡುಹಂದಿ, ಜಿಂಕೆಗಳ ಉಪಟಳದಿಂದ ರಕ್ಷಿಸಿಕೊಳ್ಳಲು ಬಣ್ಣ-ಬಣ್ಣದ ಸೀರೆಗಳನ್ನು ಬಳಸಿ ರಕ್ಷಣಾ ಬೇಲಿ ನಿರ್ಮಿಸಿಕೊಂಡಿದ್ದಾರೆ.
ತಾಲ್ಲೂಕಿನ ತೇಗಂಪೂರ, ಹಲಬರ್ಗಾ, ತರನಳ್ಳಿ, ಬೀರಿ, ಹಾಲಹಿಪ್ಪರ್ಗಾ, ಕೋಸಂ, ಖಟಕಚಿಂಚೋಳಿ, ಕಣಜಿ, ಜ್ಯಾಂತಿ, ಸಾಯಗಾಂವ, ಮೇಹಕರ್, ಕೇಸರ ಜವಳಗಾ, ಇಂಚೂರ ಸೇರಿದಂತೆ ಅರಣ್ಯ ಪ್ರದೇಶದ ಜೊತೆಗೆ ನೀರಿನ ಮೂಲಗಳಾದ ಕೆರೆ, ಹಳ್ಳ, ಕಾಲುವೆಗಳ ಪ್ರದೇಶದ ಬಹುತೇಕ ಹೊಲಗಳ ರೈತರು ತಮ್ಮ ಭೂಮಿಯಲ್ಲಿ ಬೆಳೆದ ವಿವಿಧ ಬೆಳೆಗಳನ್ನು ಪ್ರಾಣಿಗಳಿಂದ ಸಂರಕ್ಷಿಸಿಕೊಳ್ಳಲು ಸೀರೆ ಬೇಲಿಯ ಮೊರೆ ಹೋಗಿದ್ದಾರೆ.
ನನ್ನ 4.5 ಎಕರೆ ಭೂಮಿಯಲ್ಲಿ ಬೆಳೆದ ಕಬ್ಬು ಪ್ರದೇಶಕ್ಕೆ ಕಾಡು ಹಂದಿಗಳು ರಾತ್ರಿ ಆಗುತ್ತಿದ್ದಂತೆ ತಂಡೋಪ ತಂಡವಾಗಿ ನುಗ್ಗಿ, ಕಬ್ಬು ಬೆಳೆಗಳಲ್ಲಿ ಬಿಡಾರ ಬಿಟ್ಟು ಕಬ್ಬು ನಾಶ ಮಾಡುತ್ತಿವೆ. ಈ ಪ್ರಾಣಿಗಳಿಂದ ನಾಕಬ್ಬನ್ನು ರಕ್ಷಿಸಿಕೊಳ್ಳಲು ಬೀದರ್‌ನ ಬಟ್ಟೆ ಅಂಗಡಿಯೊಂದರಿಂದ ಪ್ರತಿ ಸೀರೆಗೆ ಸುಮಾರು ₹25ರಂತೆ ಒಟ್ಟು 200 ಬಣ್ಣ ಬಣ್ಣದ ಸೀರೆಗಳನ್ನು ಖರೀದಿಸಿದ್ದೇನೆ.
ಇನ್ನು ಸುಮಾರು 250 ಬಿದಿರಿನ ಕಟ್ಟಿಗೆಗಳನ್ನು ಒಂದಕ್ಕೆ ₹20ರಂತೆ ಕೊಂಡುಕೊಂಡಿದ್ದೇನೆ. ಬೇಲಿ ಅಳವಡಿಸುವ ಕಾರ್ಮಿಕರ ಕೂಲಿ ಒಳಗೊಂಡಂತೆ ಸುಮಾರು ₹15 ಸಾವಿರ ಖರ್ಚು ಮಾಡಿದ್ದೇನೆ. ಹಂದಿಗಳು ಎಷ್ಟೇ ಪ್ರಯತ್ನ ಮಾಡಿದರೂ ಸೀರೆ ಬೇಲಿ ಒಳಗೆ ಪ್ರವೇಶ ಮಾಡಲು ಆಗುವುದಿಲ್ಲ ಎಂದು ರೈತ ಉಮಾಕಾಂತ ಗುಮ್ತಾ ತಿಳಿಸಿದರು.
ಕೆಲ ವರ್ಷಗಳ ಮುಂಚೆ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಮುಳ್ಳಿನಬೇಲಿ, ತಂತಿಬೇಲಿ ಹಾಗೂ ಕಲ್ಲುಗಳ ಬೇಲಿ ನಿರ್ಮಿಸುತ್ತಿದ್ದರು. ನಮ್ಮ ಭಾಗದಲ್ಲಿ ಕಾಡುಹಂದಿ, ಜಿಂಕೆ, ಮಂಗ, ನವಿಲುಗಳ ಹಾವಳಿ ಹೆಚ್ಚಾಗಿದ್ದು, ಕಬ್ಬು, ಸೋಯಾ ಅವರೆ, ಹೆಸರು, ಉದ್ದು ಸೇರಿದಂತೆ ವಿವಿಧ ಬೆಳೆ ನಾಶ ಮಾಡುತ್ತಿವೆ. ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಸೀರೆ, ದಾರ ಸೇರಿದಂತೆ ಇತರ ಬೇಲಿಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
‘ರೈತರಿಗೆ ಸಹಕರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಮಂಗ, ಜಿಂಕೆ, ಕಾಡುಹಂದಿ, ನವಿಲುಗಳ ಉಪಟಳ ನಿಯಂತ್ರಣಕ್ಕೆ ವಿಶೇಷ ಯೋಜನೆ ರೂಪಿಸಿಕೊಂಡು ಮುಂದಾಗಬೇಕು’ ಎಂದು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರಾದ ಮಲ್ಲಿಕಾರ್ಜುನ, ಶಿವಕುಮಾರ ಪಾಟೀಲ, ರಮೇಶ ಬೆಲ್ದಾರ, ನವನಾಥ ಪಾಟೀಲ ಆಗ್ರಹಿಸಿದ್ದಾರೆ.
ನನ್ನ ಹೊಲದ 4.5 ಎಕರೆ ಭೂಮಿಯಲ್ಲಿ ಬೆಳೆದ ಕಬ್ಬನ್ನು ಕಾಡುಹಂದಿಗಳ ಕಾಟದಿಂದ ರಕ್ಷಿಸಲು ಸುಮಾರು ₹15 ಸಾವಿರ ಖರ್ಚು ಮಾಡಿ ಸೀರೆಗಳ ಬೇಲಿ ಹಾಕಿದ್ದೇನೆ.– ಉಮಾಕಾಂತ ಗುಮ್ತಾ, ರೈತ ಹಲಬರ್ಗಾ
ಕಾಡುಪ್ರಾಣಿಗಳ ಉಪಟಳದಿಂದ ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಯನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಮುಂದಾಗಬೇಕು.– ನವನಾಥ ಪಾಟೀಲ, ರೈತ ತೇಗಂಪೂರ
ಜಿಂಕೆಗಳ ನಿಯಂತ್ರಣಕ್ಕಾಗಿ ತಾಲ್ಲೂಕಿನ ಕೋನಮೇಳಕುಂದಾ ಅರಣ್ಯ ಪ್ರದೇಶದಲ್ಲಿ ಜಿಂಕೆಧಾಮ ನಿರ್ಮಿಸಲಾಗಿದೆ. ಕಾಡುಹಂದಿಗಳ ನಿಯಂತ್ರಣಕ್ಕೆ ಅರಣ್ಯ ಪ್ರದೇಶದ ಸಂರಕ್ಷಣೆಯೊಂದೇ ಮಾರ್ಗ.– ಪ್ರವೀಣಕುಮಾರ ಮೋರೆ, ಸಾಮಾಜಿಕ ವಲಯ ಅರಣ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.