ADVERTISEMENT

ರೈತರ ಹಬ್ಬ ಕಾರಹುಣ್ಣಿಮೆ ಸಂಭ್ರಮ

ಕೋವಿಡ್‌ ಕಾರಣ ಎತ್ತುಗಳ ಮೆರವಣಿಗೆ ಕೈಬಿಟ್ಟ ರೈತರು, ಸರಳ ಹಬ್ಬ ಆಚರಣೆಗೆ ಮೊರೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 4:15 IST
Last Updated 25 ಜೂನ್ 2021, 4:15 IST
ಬೀದರ್ ತಾಲ್ಲೂಕಿನ ಚಟ್ನಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಘಾಳೆಪ್ಪ ಚಟ್ನಳ್ಳಿ ಅವರು ತಮ್ಮ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿದರು
ಬೀದರ್ ತಾಲ್ಲೂಕಿನ ಚಟ್ನಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಘಾಳೆಪ್ಪ ಚಟ್ನಳ್ಳಿ ಅವರು ತಮ್ಮ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿದರು   

ಬೀದರ್: ಮುಂಗಾರು ಹಂಗಾಮಿನ ರೈತರ ಮೊದಲ ಹಬ್ಬ ಎಂದೇ ಕರೆಯಲಾಗುವ ಕಾರ ಹುಣ್ಣಿಮೆಯನ್ನು ಕೋವಿಡ್ ಕರಿ ನೆರಳ ನಡುವೆಯೂ ಜಿಲ್ಲೆಯಲ್ಲಿ ಗುರುವಾರ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ರೈತರು ಎತ್ತುಗಳ ಮೈ ತೊಳೆದರು. ಎತ್ತಿನ ಗಾಡಿ, ಕೂರಿಗೆ, ಕುಂಟಿ, ನೊಗ ಮೊದಲಾದ ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸಿದರು.

ಎತ್ತುಗಳಿಗೆ ಬಣ್ಣ ಬಳಿದು, ಹಣೆಗೆ ಬಾಸಿಂಗ, ಕೊರಳಲ್ಲಿ ಗೆಜ್ಜೆ ಸರ, ಘಂಟೆ ಕಟ್ಟಿದರು. ಮೈಮೇಲೆ ಅಲಂಕಾರಿಕ ವಸ್ತುಗಳನ್ನು ಹಾಕಿ, ಶೃಂಗಾರಗೊಳಿಸಿದರು. ಬಳಿಕ ಅವುಗಳಿಗೆ ಪೂಜೆ ಸಲ್ಲಿಸಿ, ಹೋಳಿಗೆ, ಹುಗ್ಗಿ ತಿನ್ನಿಸಿದರು.

ADVERTISEMENT

ನಂತರ ಎತ್ತುಗಳನ್ನು ದೇವಸ್ಥಾನಗಳಿಗೆ ಒಯ್ದು, ಮಳೆ, ಬೆಳೆ ಚೆನ್ನಾಗಿ ಬರಲಿ, ಕೃಷಿಗೆ ಬೆನ್ನೆಲುಬು ಆಗಿರುವ ಎತ್ತುಗಳಿಗೆ ಯಾವುದೇ ತೊಂದರೆ ಆಗದಿರಲಿ, ಕೋವಿಡ್ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ತಾಲ್ಲೂಕಿನ ಜನವಾಡ, ಕಮಠಾಣ, ಬಗದಲ್, ಮನ್ನಳ್ಳಿ, ಚಟ್ನಳ್ಳಿ, ಅಲಿಯಂಬರ್, ಮಾಳೆಗಾಂವ್, ಬಾವಗಿ ಸೇರಿದಂತೆ ವಿವಿಧೆಡೆ ಹಬ್ಬದ ಸಂಭ್ರಮ ಕಂಡು ಬಂದಿತು.

‘ಕಾರ ಹುಣ್ಣಿಮೆ ಪ್ರಯುಕ್ತ ಹಿಂದಿನಿಂದಲೂ ಎತ್ತುಗಳ ಮೆರವಣಿಗೆ ಮಾಡುತ್ತ ಬರಲಾಗಿದೆ. ಕೋವಿಡ್ ಕಾರಣ ಈ ಬಾರಿ ಕೆಲ ಕಡೆ ಮೆರವಣಿಗೆ ನಡೆದರೆ, ಇನ್ನು ಕೆಲ ಕಡೆ ಸಾಂಕೇತಿಕವಾಗಿ ಹಬ್ಬ ಆಚರಣೆ ಮಾಡಲಾಗಿದೆ’ ಎಂದು ಬಾವಗಿಯ ಭದ್ರೇಶ್ವರ ಮಠದ ಶಿವಕುಮಾರ ಸ್ವಾಮಿ ತಿಳಿಸಿದರು.

ಹನುಮಾನ್‌ ಮಂದಿರದ ಪ್ರದಕ್ಷಿಣೆ

ಕಮಲನಗರ: ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಗುರುವಾರ ಪ್ರಗತಿ ಪರ ರೈತ ಮಡಿವಾಳಪ್ಪ ಮುರ್ಕೆ ಅವರ ಉಸ್ತುವಾರಿಯಲ್ಲಿ ರೈತರು ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು.

ಎತ್ತುಗಳು, ಆಕಳು, ಹೋರಿಗಳನ್ನು ಬೆಳಿಗ್ಗೆ ತೊಳೆದು ಬಣ್ಣ ಹಚ್ಚಿ ಸಿಂಗರಿಸಲಾಯಿತು. ಅರ್ಚಕರು ವಿಶೇಷ ಹಾಡು ಹಾಡುವ ಮೂಲಕ ಕರಿ ಹರಿಯಲು ಬಿಡಲಾಯಿತು. ಬಳಿಕ ಸಿಂಗರಿಸಲಾದ ಹೋರಿ, ಎತ್ತುಗಳನ್ನು ಊರಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಹನುಮಾನ್‌ ಮಂದಿರವನ್ನು ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಊರ ಹೊರಗಿನ ಅಗಸಿಯವರೆಗೆ ಮೆರವಣಿಗೆ ಮಾಡಲಾಯಿತು.

ಅರ್ಚಕ ಎಂ.ಎಸ್ ಹಿರೇಮಠ ಮಾತನಾಡಿ, ‘ಕಾರ ಹುಣ್ಣಿಮೆ ಸಂಬಂಧಗಳನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ’ ಎಂದರು.

ಅರ್ಚಕ ಚಂದ್ರಕಾಂತ ಹಿರೇಮಠ, ಮಹಾದಯ್ಯ ಮಠಪತಿ, ಜಗದೀಶ ಮುರ್ಕೆ, ಪವನ ಮುರ್ಕೆ, ಶಿವರಾಜ ಶ್ರೀಗಿರೆ, ನಾಗನಾಥ, ರಮೇಶ, ವಿಶಾಲ ಸೂರ್ಯವಂಶಿ, ಯುವ ರಾಜ ಚ್ಯಾಂಡೇಶ್ವರ, ವಿಷ್ಣು, ರಾಹುಲ ಹಿರೇಮಠ ಇದ್ದರು.

ಎತ್ತುಗಳಿಗೆ ಪೂಜೆ

ಬಸವಕಲ್ಯಾಣ: ತಾಲ್ಲೂಕಿನ ಮಂಠಾಳದಲ್ಲಿ ಕಾರಹುಣ್ಣಿಮೆ ಅಂಗವಾಗಿ ಗುರುವಾರ ರೈತರು ತಮ್ಮ ಎತ್ತುಗಳನ್ನು ಸಿಂಗರಿಸಿ, ಪೂಜೆ ಸಲ್ಲಿಸಿದರು.

ಎತ್ತಿನ ಬಂಡಿ, ಕೂರಿಗೆ, ಕುಂಟಿ, ನೊಗ ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸಿ, ಪೂಜೆ ಮಾಡಿದರು.

ಎತ್ತುಗಳ ಪೂಜೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ, ಮಹಾದೇವ ಪಾಟೀಲ, ಶರಣು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.