ಔರಾದ್: ಪಟ್ಟಣದ ರೈತ ಸಂಪರ್ಕ ಕೇಂದ್ರದ ಎದುರು ಜಮಾಯಿಸಿದ್ದ ರೈತರು ಬಿತ್ತನೆ ಬೀಜಕ್ಕಾಗಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿ ಮುತ್ತಿಗೆ ಹಾಕಿದ ಘಟನೆ ಭಾನುವಾರ ನಡೆದಿದೆ.
ಔರಾದ್ ಹಾಗೂ ಸುತ್ತಲಿನ ಕೆಲ ಗ್ರಾಮ, ತಾಂಡಾಗಳ ರೈತರು ಬಿತ್ತನೆ ಬೀಜ ಪಡೆಯಲು ಆಗಮಿಸಿದ್ದರು. ನಾವು ಬೆಳಿಗ್ಗೆಯಿಂದ ಸಾಲುಗಟ್ಟಿ ನಿಂತರೂ ಬೀಜ ಸಿಗುತ್ತಿಲ್ಲ ಎಂದು ದೂರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
‘ಈ ರೈತ ಸಂಪರ್ಕ ಕೇಂದ್ರದಲ್ಲಿ ಸಮರ್ಪಕ ಬೀಜದ ದಾಸ್ತಾನು ಇಲ್ಲ. ಆದರೆ ಅಧಿಕಾರಿಗಳು ಸುಳ್ಳು ಹೇಳಿ ರೈತರನ್ನು ಕಾಯಿಸಲಾಗುತ್ತಿದೆ’ ಎಂದು ಎಪಿಎಂಸಿ ಮಾಜಿ ಸದಸ್ಯ ಗೋವಿಂದ ಇಂಗಳೆ ದೂರಿದರು.
‘ಸೋಯಾ ಬೀಜದ ಬೇಡಿಕೆ ಜಾಸ್ತಿ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಬೀಜ ತರಿಸಿಲ್ಲ. ಹೀಗಾಗಿ ತಾಲ್ಲೂಕಿನ ಎಲ್ಲ ಕಡೆ ರೈತರು ಬೀಜಕ್ಕಾಗಿ ಪರದಾಡುತ್ತಿದ್ದಾರೆ’ ಎಂದು ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಬೀಜ ವಿತರಣೆಗೆ ಗೊಂದಲ ಆಗಬಾರದು ಎಂದು ಲಾಟರಿ ಮೂಲಕ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಆಯಾ ಗ್ರಾಮಗಳ ರೈತರು ನಿಗದಿತ ದಿನದಂದು ಬಂದು ಬೀಜ ಪಡೆಯಲು ತಿಳಿಸಲಾಗಿದೆ. ಆದರೆ ನಿಗದಿತ ಗ್ರಾಮಗಳ ಹೊರತುಪಡಿಸಿ ಬೇರೆ ಊರಿನ ರೈತರು ಬಂದಿರುವುದರಿಂದ ನಮಗೆ ಬೀಜ ವಿತರಿಸಲು ಸಮಸ್ಯೆಯಾಗಿದೆ’ ಎಂದು ಕೃಷಿ ಅಧಿಕಾರಿ ಸ್ವಾತಿ ತಿಳಿಸಿದರು.
‘ಔರಾದ್ ರೈತ ಸಂಪರ್ಕ ಕೇಂದ್ರಕ್ಕೆ 7600 ಕ್ವಿಂಟಲ್ ಸೋಯಾ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ ಈಗಾಗಲೇ 5100 ಕ್ವಿಂಟಲ್ ಬೀಜ ಬಂದಿದೆ. ಇನ್ನು 2500 ಕ್ವಿಂಟಲ್ ಬರಬೇಕಿದೆ. ಬಂದ ನಂತರ ರೈತರಿಗೆ ವಿತರಿಸುತ್ತೇವೆ. ಆದರೆ ಕೆಲವರು ವಿನಾ ಕಾರಣ ಗೊಂದಲ ಮಾಡಿ ನಮ್ಮ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.
‘ನಮ್ಮ ತಾಲ್ಲೂಕಿನಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ. ಭಾನುವಾರ ಸೇರಿದಂತೆ ರಜಾ ದಿನದಲ್ಲೂ ಬೀಜ ವಿತರಿಸುತ್ತಿದ್ದೇವೆ. ಆದರೆ ಸಿಬ್ಬಂದಿ ಕೊರತೆಯಿಂದ ನಮಗೆ ಹೆಚ್ಚಿನ ಹೊರೆ ಆಗುತ್ತಿದೆ. ಆದರೂ ಅದನ್ನು ನಿಭಾಯಿಸುತ್ತಿದ್ದೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.