ADVERTISEMENT

ಪ್ರಧಾನಿ ವಿರುದ್ಧ ನಿಂದನೆ ಆರೋಪ: ಶಾಹೀನ್‌ ಶಿಕ್ಷಣ ಸಂಸ್ಥೆ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 15:26 IST
Last Updated 26 ಜನವರಿ 2020, 15:26 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ಬೀದರ್: ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ವಿರುದ್ಧ ಮಕ್ಕಳಿಂದ ನಾಟಕವಾಡಿಸಿದ ಆರೋಪದ ಮೇಲೆ ಶಾಹೀನ್‌ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ನಾಟಕದ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟ ವ್ಯಕ್ತಿಯ ವಿರುದ್ಧ ಭಾನುವಾರ ನಗರದ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸಿದ ಆರೋಪದ ಮೇಲೆ ಶಾಹೀನ್‌ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಫೇಸ್‌ಬುಕ್‌ ಗೆ ಪೋಸ್ಟ್‌ ಮಾಡಿದ ಮಹಮ್ಮದ್‌ ಯುಸೂಫ್ ರಹೀಂ ವಿರುದ್ಧ ಸಾಮಾಜಿಕ ಕಾರ್ಯಕರ್ತ ನಿಲೇಶ ರಕ್ಷಾಳ್‌ ದೂರು ದಾಖಲಿಸಿದ್ದಾರೆ.

ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಪ್ರಾಥಮಿಕ ಶಾಲಾ ಮಕ್ಕಳಿಂದ ರಾಷ್ಟ್ರದ ಬಗ್ಗೆ ದ್ವೇಷ ಭಾವನೆ ಮೂಡುವಂತಹ ನಾಟಕವನ್ನು ಪ್ರದರ್ಶಿಸಿದ್ದಾರೆ. ನಾಟಕದಲ್ಲಿ ‘ನರೇಂದ್ರ ಮೋದಿ ಅವರಿಗೆ ಚಪ್ಪಲಿಯಿಂದ ಹೊಡೆಯಬೇಕು’ ಎನ್ನುವ ಮಾತನ್ನು ಮಕ್ಕಳಿಂದ ಆಡಿಸಿದ್ದಾರೆ ಎಂದು ದೂರಲಾಗಿದೆ.

ADVERTISEMENT

ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಕಾನೂನುಗಳು ಜಾರಿಗೆ ಬಂದರೆ ಮುಸ್ಲಿಮರು ದೇಶಬಿಟ್ಟು ಹೋಗಬೇಕಾಗುತ್ತದೆ ಎನ್ನುವ ಹೇಳಿಕೆಯನ್ನು ಜನವರಿ 21 ರಂದು ಮಧ್ಯಾಹ್ನ 3 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ. ಈ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ. ಸಿಎಎ ವಿರೋಧಿಸಲು ಮಕ್ಕಳನ್ನು ಬಳಸಿಕೊಂಡಿರುವ ಶಾಹೀನ್‌ ಮುಖ್ಯಸ್ಥರು ದೇಶದ್ರೋಹದಂತಹ ಕೃತ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ಬರೆಯಲಾಗಿದೆ.

ಮಕ್ಕಳಿಗೆ ತಪ್ಪು ಸಂದೇಶ ನೀಡಿದ ಶಾಹೀನ್‌ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹಾಗೂ ಫೇಸ್‌ಬುಕ್‌ನಲ್ಲಿ ಅಪಲೋಡ್‌ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಠಿಣ ಕ್ರಮ:‘ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಯಾರೇ ಆಗಲಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದ್ದಾರೆ.

ಮಾಹಿತಿ ಇಲ್ಲ:‘ಹತ್ತು ದಿನಗಳಿಂದ ಬೀದರ್‌ನಲ್ಲಿ ಇಲ್ಲ. ಶಿಕ್ಷಣ ಸಂಸ್ಥೆಯ ಕಾರ್ಯ ನಿಮಿತ್ತ ದೆಹಲಿಗೆ ಬಂದಿದ್ದೇನೆ. ಶಾಲೆಯಲ್ಲಿ ಮಕ್ಕಳಿಂದ ನಾಟಕವಾಡಿಸಿದ ಹಾಗೂ ನಮ್ಮ ಸಂಸ್ಥೆಯ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ’ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌ ತಿಳಿಸಿದ್ದಾರೆ.

‘ಬೀದರ್‌ಗೆ ಬಂದು ವಿವರವಾದ ಮಾಹಿತಿ ಪಡೆಯಲಾಗುವುದು. ನಮ್ಮ ಸಂಸ್ಥೆಯ ಸಿಬ್ಬಂದಿಯಿಂದ ತಪ್ಪು ನಡೆದಿದ್ದರೆ ಮುಲಾಜಿಲ್ಲದೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.