ADVERTISEMENT

250 ಅಭ್ಯರ್ಥಿಗಳಿಗೆ ಸೇನಾ ಭರ್ತಿ ಪೂರ್ವ ಉಚಿತ ತರಬೇತಿ

ಆಯ್ಕೆ ಪ್ರಕ್ರಿಯೆ ಆರಂಭ: ಹೆಸರು ನೋಂದಣಿಗೆ ಫೆ. 27 ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 12:14 IST
Last Updated 22 ಫೆಬ್ರುವರಿ 2023, 12:14 IST
ರೇವಣಸಿದ್ದಪ್ಪ ಜಲಾದೆ
ರೇವಣಸಿದ್ದಪ್ಪ ಜಲಾದೆ   

ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 250 ಅಭ್ಯರ್ಥಿಗಳಿಗೆ ವಸತಿ ಸಹಿತ ಉಚಿತ ಸೇನಾ ಭರ್ತಿ ಪೂರ್ವ ಸಿದ್ಧತಾ ತರಬೇತಿ ಶಿಬಿರ ನಡೆಸಲು ನಿರ್ಧರಿಸಿದೆ ಎಂದು ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಹೇಳಿದರು.

ಈಗಾಗಲೇ ಎರಡು ತಂಡಗಳ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಸಲಾಗಿದೆ. ಮೂರನೇ ತಂಡದ 90 ದಿನಗಳ ತರಬೇತಿ ಶಿಬಿರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೇನೆ, ಅರೆ ಸೇನೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸ ಬಯಸುವ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆಗಳ 17 ವರ್ಷದಿಂದ 23 ವರ್ಷದ ಒಳಗಿನ ಯುವಕ, ಯುವತಿಯರು ಸಂಘದ ವೆಬ್‍ಸೈಟ್ www.kkhracs.com ನಲ್ಲಿ ತರಬೇತಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ADVERTISEMENT

ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಬೀದರ್ ನಗರದ ಬೆನಕನಳ್ಳಿ ರಸ್ತೆಯಲ್ಲಿ ಇರುವ ಗ್ಲೊಬಲ್ ಸೈನಿಕ ಅಕಾಡೆಮಿಯಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08472-266601, ಮೊಬೈಲ್ ಸಂಖ್ಯೆ 8095799799 ಅಥವಾ 9900438183ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಗ್ಲೊಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಅವರ ನೇತೃತ್ವದಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಶಸ್ತ್ರ ಹಾಗೂ ಅರೆ ಸೇನಾ ಪಡೆ ಪೂರ್ವ ಸಿದ್ಧತಾ ತರಬೇತಿ ಕೊಡಲಿದ್ದಾರೆ ಎಂದು ಹೇಳಿದರು.

ಸಂಘದಿಂದ ಯುವಕರಿಗೆ ಲಘು ಹಾಗೂ ಭಾರಿ ಮೋಟಾರು ವಾಹನಗಳ ತರಬೇತಿಯನ್ನೂ ಕೊಡಲಾಗುತ್ತಿದೆ. ಆಸಕ್ತರು ಫೆ. 28 ರ ಒಳಗೆ ಸಂಘದ ವೆಬ್‍ಸೈಟ್ www.kkhracs.com ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಗ್ಲೊಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಸೇನೆಗೆ ಸೇರಿ ತಾಯ್ನೆಲದ ಸೇವೆ ಮಾಡ ಬಯಸುವ ಅಭ್ಯರ್ಥಿಗಳಿಗೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಮತ್ತೊಂದು ಸದಾವಕಾಶವನ್ನು ಒದಗಿಸಿಕೊಟ್ಟಿದೆ ಎಂದು ಹೇಳಿದರು.

ಎರಡು ತಂಡಗಳಿಗೆ ಯಶಸ್ವಿ ತರಬೇತಿ ಕೊಡಲಾಗಿದೆ. ಬಹಳಷ್ಟು ಜನ ಸೇನೆಗೆ ಆಯ್ಕೆ ಕೂಡ ಆಗಿದ್ದಾರೆ. ಸೇನೆಯಲ್ಲಿ ಬಹಳಷ್ಟು ಅವಕಾಶಗಳು ಇವೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಸೇನೆ ಸೇರ್ಪಡೆಗೆ ಒಲವು ತೋರಬೇಕು. ಪೂರ್ವ ಸಿದ್ಧತಾ ತರಬೇತಿಯ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.