ಬೀದರ್: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಮೂಲಕ ಸಪ್ಲಿಮೆಂಟರಿ ಪರೀಕ್ಷೆಗೆ ಸಜ್ಜುಗೊಳಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ.
ಮೇ 26ರಿಂದ ಸಪ್ಲಿಮೆಂಟರಿ ಪರೀಕ್ಷೆಗಳು ಆರಂಭಗೊಳ್ಳಲಿವೆ. ಪರೀಕ್ಷೆಗೂ ಮುನ್ನ ಹತ್ತು ದಿನಗಳ ಕಾಲ ಜಿಲ್ಲೆಯಾದ್ಯಂತ ಉಚಿತ ಟ್ಯೂಶನ್ ನಡೆಸಲು ನಿರ್ಧರಿಸಲಾಗಿದೆ. ಮೇ 15ರಿಂದ 25ರ ವರೆಗೆ ತರಗತಿಗಳು ನಡೆಯಲಿವೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ನಾಲ್ಕು ಕೇಂದ್ರಗಳನ್ನು ಸಜ್ಜುಗೊಳಿಸಿ, ಅಲ್ಲಿ ಮಕ್ಕಳಿಗೆ ಪರೀಕ್ಷೆಗೆ ಸಿದ್ಧಗೊಳಿಸಲು ತೀರ್ಮಾನಿಸಲಾಗಿದೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 24,187 ವಿದ್ಯಾರ್ಥಿಗಳಲ್ಲಿ 12,651 ಜನ ಪಾಸಾಗಿದ್ದಾರೆ. 11,536 ಮಂದಿ ಫೇಲಾಗಿದ್ದು, ಇವರನ್ನು ಸಂಪರ್ಕಿಸಿ, ವಿಶೇಷ ತರಗತಿಗಳಿಗೆ ಕರೆತರಲು ಸಿದ್ಧತೆ ನಡೆದಿದೆ.
ಉಚಿತ ಟ್ಯೂಶನ್‌ಗೆ ಮಕ್ಕಳು ಹಾಜರಾಗುವ ಜವಾಬ್ದಾರಿಯನ್ನು ಆಯಾ ಶಾಲೆಗಳ ಮುಖ್ಯಶಿಕ್ಷಕರಿಗೆ ವಹಿಸಲಾಗಿದೆ. ಮಕ್ಕಳು ಅಥವಾ ಅವರ ಪೋಷಕರನ್ನು ಸಂಪರ್ಕಿಸಿ, ಹತ್ತು ದಿನಗಳ ಟ್ಯೂಶನ್‌ಗೆ ಕರೆತಂದು, ಮಕ್ಕಳು ಯಾವ ವಿಷಯದಲ್ಲಿ ಬಹಳ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ ಎನ್ನುವುದನ್ನು ತಿಳಿದುಕೊಂಡು, ಆ ವಿಷಯಕ್ಕೆ ಹೆಚ್ಚಿನ ಒತ್ತು ಕೊಡಲು ಶಿಕ್ಷಣ ಇಲಾಖೆ ಮುಂದಾಗಿದೆ.
ರಜಾ ದಿನಗಳು ಇರುವುದರಿಂದ ಹೆಚ್ಚಿನ ಮಕ್ಕಳು ಅಜ್ಜ–ಅಜ್ಜಿ ಹಾಗೂ ಇತರೆ ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ. ಇನ್ನು, ಕೆಲವರು ಕುಟುಂಬ ಸದಸ್ಯರೊಂದಿಗೆ ಪ್ರವಾಸದಲ್ಲಿದ್ದಾರೆ. ಹೀಗಿದ್ದರೂ ಅವರೊಂದಿಗೆ ಸಂಪರ್ಕ ಸಾಧಿಸಿ, ಟ್ಯೂಶನ್‌ಗೆ ಕರೆತರಲು ಶತಾಯಗತಾಯ ಪ್ರಯತ್ನ ಆರಂಭಗೊಂಡಿದೆ. ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಗೊತ್ತಾಗಿದೆ.
ಅಂಕಿ ಅಂಶ 24187 ಪರೀಕ್ಷೆಗೆ ಹಾಜರಾದವರು 12651 ಪಾಸಾದವರು 11536 ಫೇಲಾದವರು 52.30% ಒಟ್ಟು ಫಲಿತಾಂಶ
‘ಫಲಿತಾಂಶ ಕುಸಿತಕ್ಕೆ ಅತಿಥಿ ಶಿಕ್ಷಕರು ಹೊಣೆ’ (ಚಿತ್ರ ಇದೆ) ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 10ರಷ್ಟು ಫಲಿತಾಂಶ ಕುಸಿದಿದೆ. ಇದಕ್ಕೆ ಅತಿಥಿ ಶಿಕ್ಷಕರೇ ಹೊಣೆಗಾರರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ. ‘ಜಿಲ್ಲೆಯಲ್ಲಿ ಶಿಕ್ಷಕರ ಸಂಖ್ಯೆ ಕೊರತೆ ಇದೆ. ಆ ಜಾಗದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಆದರೆ ಅವರಲ್ಲಿ ಬೋಧನೆಯ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ಪರಿಶೀಲಿಸಲಿಲ್ಲ. ಯಾರೇ ಬಂದರೂ ಅವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಯಾರೂ ಆ ಹುದ್ದೆಗೆ ಬರದಿದ್ದಾಗ ಅದು ಅನಿವಾರ್ಯ ಕೂಡ ಆಗುತ್ತದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಲೀಂ ಪಾಶಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಈ ಸಲವೂ ಯಾರು ಸಿಗದಿದ್ದರೆ ಹಿಂದಿನ ಅತಿಥಿ ಶಿಕ್ಷಕರನ್ನೇ ಮುಂದುವರೆಸಲಾಗುತ್ತದೆ. ಆದರೆ ಯಾರಲ್ಲಿ ಸರಿಯಾಗಿ ಪಾಠ ಮಾಡುವ ಸಾಮರ್ಥ್ಯ ಇಲ್ಲವೋ ಅಂತಹವರನ್ನು ಬದಲಿಸಬೇಕೆಂದು ಜಿಲ್ಲಾಡಳಿತವನ್ನು ಕೋರಲಾಗಿದೆ ಎಂದು ವಿವರಿಸಿದ್ದಾರೆ.
‘ಪರೀಕ್ಷೆಗಿಲ್ಲ ಶುಲ್ಕ'
‘ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೇ 26ರಿಂದ ಜೂ. 2ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಬಹುದು. ಪರೀಕ್ಷೆ ಬರೆಯಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಈ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.