ADVERTISEMENT

ಸರ್ಕಾರದ ಪರಿಹಾರ ಧನ ಪಡೆಯಲು ರೈತರಿಗೆ ಫ್ರೂಟ್ಸ್ ನೋಂದಣಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 16:17 IST
Last Updated 26 ಅಕ್ಟೋಬರ್ 2023, 16:17 IST
ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಮಾರ್ಥಂಡ ಎನ್‌ ಮಚಕುರಿ
ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಮಾರ್ಥಂಡ ಎನ್‌ ಮಚಕುರಿ   

ಹುಲಸೂರ: ತಾಲ್ಲೂಕಿನ ರೈತರು ಕೃಷಿ ಇಲಾಖೆಯಿಂದ ಸರ್ಕಾರದ ಪರಿಹಾರ ಧನ ಪಡೆಯಲು ಹಾಗೂ ಹಲವು ಯೊಜನೆ ಲಾಭ ಪಡೆಯಬೇಕಾದರೆ ಫ್ರೂಟ್ಸ್ ನೋಂದಣಿ ಕಡ್ಡಾಯವಾಗಿದೆ. ರೈತರು ತಪ್ಪದೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಾರ್ಥಂಡ ಎನ್‌. ಮಚಕುರಿ ತಿಳಿಸಿದ್ದಾರೆ.

ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯು, ಅಂತರ್ಜಾಲ ಆಧಾರಿತ ತಂತ್ರಾಂಶ ವ್ಯವಸ್ಥೆಯಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅನುಕೂಲವಾಗುತ್ತದೆ. ಫಲಾನುಭವಿಗಳು ಪಡೆಯುವ ಪ್ರಯೋಜನಗಳ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಇದು ರೈತರು, ಭೂಮಿ ಮತ್ತು ಅವರಿಗೆ ವಿಸ್ತರಿಸಿದ ಪ್ರಯೋಜನಗಳ ಸಮಗ್ರ ವಿವರಗಳನ್ನೊಳಗೊಂಡ ಏಕೀಕೃತ ದತ್ತಾಂಶವಾಗಿರುತ್ತದೆ. ರೈತರು, https://fruits.karnataka.gov.in ಮೂಲಕ ವೆಬ್‌ಸೈಟ್‌ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ರೈತರು, ‘ನಾಗರೀಕ ಪ್ರವೇಶ’ (Citizen Login)ಗೆ ಭೇಟಿ ನೀಡಿ ಅವಶ್ಯ ದಾಖಲೆ ಒದಗಿಸಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಆಧಾರ್ ಸಂಖ್ಯೆ ಮತ್ತು ಹೆಸರು, ಜಮೀನಿನ ವಿವರ ದಾಖಲಿಸಬೇಕು. ಸಂಬಂಧಪಟ್ಟ ಅನುಮೋದನಾ ಅಧಿಕಾರಿಯು ಅನುಮೋದಿಸಿದ ನಂತರ, ನೋಂದಣಿ ಪೂರ್ಣಗೊಳ್ಳುತ್ತದೆ ಎಂದು ಅವರು ತಿಳಿಸಿದರು.

ADVERTISEMENT

ಒಂದು ವೇಳೆ ಯಾರಾದರೂ ನಿರ್ದಿಷ್ಟ ವರ್ಗದ ಅಡಿಯಲ್ಲಿ ನೋಂದಾಯಿಸಲು ಬಯಸಿದರೆ (ಪರಿಶಿಷ್ಟ ಜಾತಿ ಮತ್ತು ಪಂಗಡ ಇತ್ಯಾದಿ.,) ಸಂಬಂಧಿತ ಪ್ರಮಾಣಪತ್ರಗಳು ಸಹ ಅಗತ್ಯವಾಗಿರುತ್ತದೆ. ಭೂ ವಿವರಗಳು, ದೂರವಾಣಿ ಸಂಖ್ಯೆಗಳು, ವಿಳಾಸ, ಆಧಾರ್ ಪ್ರಕಾರ ಹೆಸರು ಮತ್ತು ಹಿಂದೆ ತಪ್ಪಾಗಿ ನಮೂದಿಸಿರುವ ಲಿಂಗ, ಬ್ಯಾಂಕ್ ವಿವರಗಳು, ಜಾತಿ ಮತ್ತು ಹುಟ್ಟಿದ ದಿನಾಂಕವನ್ನು ಮಾರ್ಪಡಿಸಬಹುದು ಎಂದು ತಿಳಿಸಿದ್ದಾರೆ.

ಪ್ರತೇಕ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಿಂದ ಪಡೆಯಬಹುದಾದ ಸಹಾಯಧನ ಮತ್ತು ಪರಿಹಾರ ಧನಕ್ಕಾಗಿ ರೈತರು ಪ್ರತಿ ವರ್ಷ ದಾಖಲೆಗಳನ್ನು ಸಲ್ಲಿಸುವುದು ಮತ್ತು ಇಲಾಖೆಗಳಿಗೆ ಅಲ್ಲೆದಾಡುವುದನ್ನು ತಪ್ಪಿಸುತದ್ದೆ. ಅದಲ್ಲದೆ ಇಲಾಖೆಗಳು ಸಾಂರ್ಪದಾಯಿಕ ಪದ್ಧತಿ ಮೂಲಕ ಯೋಜನಾ ಅನುಷ್ಠಾನಗೊಳಿಸುವಾಗ ಎದುರಾಗುವ ಸಮಸ್ಯೆಗಳಿಂದ ಹೊರಬರಲು ನೇರವಾಗುತ್ತದೆ. ಅದೇ ರೀತಿಯಾಗಿ ಬೆಳೆ ನಷ್ಟ ಪರಿಹಾರ ಒದಗಿಸಲು, ಸಹಾಯ ಧನ ಅಡಿಯಲ್ಲಿ ಬೀತನೆ ಬೀಜ ಪಡೆಯಲು ಮತ್ತು ಪ್ರಧಾನ ಮಂತ್ರಿ ಕೃಷಿ ಸಮಾನ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಡಲು ಫ್ರೂಟ್ಸ್ ಐಡಿ ನೇರವಾಗಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಬಸವಕಲ್ಯಾಣ, ಹುಲಸೂರ ತಾಲ್ಲೂಕಿನ ರೈತರು, ಫ್ರೂಟ್ಸ್ ನೋಂದಣಿ ಮಾಡಿಕೊಂಡಿದ್ದರೆ, ತಮ್ಮ ಎಲ್ಲ ಜಮೀನುಗಳ ಸರ್ವೇ ನಂಬರ್‌ಗಳನ್ನು ಸೇರ್ಪಡೆಯಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ತಮ್ಮ ಜಮೀನಿನ ಪಹಣಿ ವಿವರಗಳು, ಆಧಾರ ಪ್ರತಿ ,ಆಧಾರ ಮತ್ತು ಮೋಬೈಲ್‌ ನಂಬರ್ ಲಿಂಕ್‌ ಆಗಿರುವ ಬ್ಯಾಂಕ್‌ ಪಾಸ್‌ಬುಕ್‌ನ ಪ್ರತಿಯನ್ನು ಹಾಜರು ಪಡಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.