ಹುಲಸೂರ: ಕಳಪೆ ಗುಣಮಟ್ಟದ ಎಣ್ಣೆ, ರಸಾಯನಿಕ ಮಿಶ್ರಿತ ಬಣ್ಣ ಬಳಕೆ, ಪಾಲನೆಯಾಗದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಗಮಗಳು...
ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಎಗ್‌ರೈಸ್ ಹಾಗೂ ಪಾನಿಪುರಿ, ಕುರುಕಲು ತಿಂಡಿ ಸೇರಿದಂತೆ ಇತರ ತಳ್ಳುಗಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಾರೆ. ಪಟ್ಟಣದ ಪ್ರಮುಖ ವೃತ್ತ, ಬಸ್ ನಿಲ್ದಾಣ, ರಸ್ತೆ ಬದಿ ಹೀಗೆ ಹಲವೆಡೆ ಉಪಾಹಾರ ಕೇಂದ್ರಗಳು ತಲೆ ಎತ್ತಿದ್ದು, ಆದರೆ ಸುರಕ್ಷತೆ ಬಗ್ಗೆ ಮಾತ್ರ ಕಾಳಜಿಯಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಹುಲಸೂರ ಪಟ್ಟಣ ಸೇರಿ ತಾಲ್ಲೂಕಿನ ಬೇಲೂರ, ಮುಚಳಂಬ, ಗಡಿಗೌಡಗಾಂವ್, ಮೀರಖಲ್ ಸೇರಿ ಪ್ರಮುಖ ಜನನಿಬಿಡ ಸ್ಥಳಗಳಾದ ಬಸ್ ನಿಲ್ದಾಣ, ಮಹನೀಯರ ಹೆಸರಿನ ವೃತ್ತ ಸೇರಿದಂತೆ ಹಲವು ಪ್ರದೇಶದಲ್ಲಿ ಬಯಲು ಜಾಗದಲ್ಲಿ ತಳ್ಳು ಬಂಡಿಯಲ್ಲಿ ಉಪ್ಪಿಟ್ಟು, ದೋಸೆ, ಪಲಾವ್, ಇಡ್ಲಿ, ಮಿರ್ಚಿ ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ, ಗುಣಮಟ್ಟ ಇರುವುದಿಲ್ಲ ಎನ್ನುತ್ತಾರೆ ಜನರು.
ರಸ್ತೆ ಬದಿಯಲ್ಲಿ ಕಡಿಮೆ ದರದಲ್ಲಿ ಉಪಹಾರ ಸಿಗುತ್ತದೆ. ಆಹಾರ ಸುರಕ್ಷತೆ ನಂತರದ ಮಾತು ಹೊಟ್ಟೆ ತುಂಬಿದರೆ ಸಾಕಪ್ಪ ಎಂದು ನಿಟ್ಟುಸಿರು ಬಿಡುತ್ತಾರೆ ಬಡ ಕೂಲಿಕಾರ್ಮಿಕರು. ಒಂದು ಸಮಾಧಾನದ ಸಂಗತಿ ಎಂದರೆ ಕ್ಯಾನಿನಲ್ಲಿ ತುಂಬಿದ ಫಿಲ್ಟರ್ ನೀರು ಎಂದು ಕುಡಿಯುತ್ತೇವೆ. ಸ್ವಚ್ಛತೆ ಎಂಬುವುದು ಇರುವುದಿಲ್ಲ. ತಿಂದ ಪ್ಲೇಟ್‌ಗಳನ್ನು ಒಂದು ಡಬ್ಬದಲ್ಲಿ ಹಾಕುತ್ತಾರೆ. ಚರಂಡಿ ವಾಸನೆ ಜತೆಯಲ್ಲಿ ನೋಣಗಳ ಹಾವಳಿಯು ಇರುತ್ತದೆ ಸುರಕ್ಷತೆಯೂ ಇಲ್ಲ. ಪ್ಲಾಸ್ಟಿಕ್ ಹಾಳೆ ಅಥವಾ ಪ್ಲೇಟ್‌ನಲ್ಲಿ ಆಹಾರ ವಸ್ತುಗಳು ಸರಬರಾಜು ಮಾಡುತ್ತಾರೆ. ರಸ್ತೆಯ ಮೇಲೆ ನಿಂತು ಆಹಾರ ಸೇವನೆ ಮಾಡಬೇಕು. ಆಹಾರ ಸುರಕ್ಷತೆ ಇಲ್ಲ ಎನ್ನುತ್ತಾರೆ ಕೂಲಿ ಕಾರ್ಮಿಕರೊಬ್ಬರು.
ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಪಾಲನೆಯಾಗುತ್ತಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ತಲೆಗೆ, ಕೈಗೆ ಗ್ಲೌಸ್ ಹಾಕಿಕೊಳ್ಳುವುದಿಲ್ಲ. ಗಲೀಜು ಕೈಯಿಂದಲೇ ಹಿಟ್ಟು ಮಿಶ್ರಣ ಮಾಡಿ ಬಜಿ ಮಾಡುತ್ತಾರೆ. ಗೋಬಿ ಮಂಚೂರಿ, ಕಬಾಬ್‌ಗಳಲ್ಲಿ ನಿಷೇಧಿತ ರಸಾಯನಿಕ ಬಳಸುವುದು ನಿಂತಿಲ್ಲ.
ಹೊಟೆಲ್‌ಗಳಲ್ಲಿ ಬೇಸನ್ ಹಿಟ್ಟು, ರವೆ, ಗೋಧಿ ಹಿಟ್ಟು, ಮೈದಾ, ತರಕಾರಿ ಸ್ವಚ್ಛಗೊಳಿಸದೇ ಬಳಸುತ್ತಾರೆ. ಗ್ರಾಹಕರು ತಿಂಡಿ, ಊಟ ಮಾಡಿ ಬಿಟ್ಟ ಪ್ಲೇಟ್‌ಗಳನ್ನು ಸರಿಯಾಗಿ ತೊಳೆಯುವುದಿಲ್ಲ. ಗ್ರಾಹಕರು ಫುಡ್ ಪಾಯಿಸನ್, ವಾಂತಿಭೇದಿ ಇತರ ರೋಗಗಳಿಂದ ಬಳಲುವುದು ಸಾಮಾನ್ಯ. ಈ ಬಗ್ಗೆ ಗ್ರಾಹಕರು ಯಾವುದೇ ಪ್ರಶ್ನೆ ಕೇಳದೆ ಇರುವುದು ಆಶ್ಚರ್ಯ.
ಆಹಾರ ಇಲಾಖೆ ಕೇವಲ ಪಡಿತರ ವಿತರಣೆಗೆ ಮಾತ್ರ ಸೀಮಿತವಾಗಿದೆ. ತಾಲ್ಲೂಕ ಆಡಳಿತ ಇದಕ್ಕೆ ತನಗೆ ಸಂಬಂಧವಿಲ್ಲವೆಂದು ಕೈಕಟ್ಟಿ ಕುಳಿತಿದೆ ಎನ್ನುವುದು ನಾಗರಿಕರ ಆರೋಪ. ಫಾಸ್ಟ್ ಫುಡ್‌ಗಳ ರುಚಿಯನ್ನು ಹೆಚ್ಚಲು ಅಜಿನಮೋಟೋ (ಟೆಸ್ಟಿಂಗ್ ಪೌಡರ್) ವ್ಯಾಪಕವಾಗಿ ಬಳಸಲಾಗುತ್ತಿದೆ. ಆಹಾರಗಳನ್ನು ರಸ್ತೆಯ ದೂಳಿನಿಂದ ಸಂರಕ್ಷಿಸಲು ಯಾವುದೇ ಸುರಕ್ಷತೆ ಕೈಗೊಂಡಿಲ್ಲ. ತಯಾರಕರು ಯಾವುದೇ ಸ್ವಚ್ಛತೆ ಕಾಪಾಡುವುದಿಲ್ಲ. ಪಟ್ಟಣದ ಬೇಕರಿ, ಚಿಕನ್ ಅಂಗಡಿಗಳ ಸಮೀಪ ತೆರಳಿದರೆ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಸಾರ್ವಜನಿಕರು ಈ ಬಗ್ಗೆ ದೂರು ನೀಡಿದಾಗ ಮಾತ್ರ ತೆರಳುವ ಅಧಿಕಾರಿಗಳು, ಅಲ್ಲಿಗೆ ಹೋಗಿ ಬಂದ ನಂತರ ಸುಮ್ಮನಾಗುತ್ತಾರೆ ಎನ್ನುವ ಆರೋಪಗಳಿವೆ.
‘ನೋಡ್ರಿ ಬಡ ವ್ಯಾಪಾರಸ್ಥರು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ವ್ಯಾಪಾರ ಮಾಡುತ್ತೇವೆ. ಅಷ್ಟರಲ್ಲಿ ನಮ್ಮ ಕೂಲಿ ಹಾಗೂ ಸಂಸಾರಕ್ಕೆ ಬೇಕಾಗುವಷ್ಟು ಹಣ ಸಂದಾಯವಾಗುತ್ತದೆ. ಆಹಾರ ಸುರಕ್ಷತೆ ಗುಣಮಟ್ಟ ಹೀಗೆ ಹಲವಾರು ಕಾನೂನು ಹೇಳಿ ನಮ್ಮ ಹೊಟ್ಟೆಮ್ಯಾಲ್ ಹೊಡೆಬ್ಯಾಡಿರಿ. ಸಾಧ್ಯವಾದಷ್ಟು ಹೆಚ್ಚಿನ ಕಾಳಜಿಯನ್ನು ಆಹಾರ ಸುರಕ್ಷತೆಗೆ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ತಳ್ಳು ಬಂಡಿ ವ್ಯಾಪಾರಸ್ಥರು.
ಆಹಾರ ಸುರಕ್ಷತೆ ಬಗ್ಗೆ ಇಲಾಖೆ ಸಿಬ್ಬಂದಿಯಿಂದ ಪರಿಶೀಲನೆ ಮಾಡಲು ತಿಳಿಸುತ್ತೇನೆ. ಹಿಂದಿನ ಪ್ರಯೋಗಾಲಯಗಳ ಸ್ಥಿತಿಗತಿ ಪರಿಶೀಲಿಸುವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದುಅಶ್ವಿನಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ
ಪಟ್ಟಣದ ಹೊಟೇಲ್‌ಗಳಲ್ಲಿ ತಟ್ಟೆಗಳ ಮೇಲೆ ಪ್ಲಾಸ್ಟಿಕ್ ಹಾಕಿ ಬಿಸಿ ಉಪಹಾರ ಸಾಂಬರ್ ನೀಡಲಾಗುತ್ತಿದ್ದು ಇದು ಕೂಡಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಅಬ್ರಾರ ಸೌದಾಗರ ಪಟ್ಟಣ ನಿವಾಸಿ
ಆಹಾರ ಸುರಕ್ಷತೆ ಸಭೆಗಳೇ ಆಗಿಲ್ಲ
ತಾಲ್ಲೂಕಿನಲ್ಲಿ ಹಲವು ವರ್ಷಗಳಾದರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಇಲ್ಲಿಯವರೆಗೆ ಸಭೆಗಳೆ ಆಗಿಲ್ಲ. ಆಹಾರ ಸುರಕ್ಷತೆ ಕುರಿತು 2006 ಮತ್ತು 2011ರಲ್ಲಿ ಕಾಯ್ದೆ ರೂಪಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎನ್ನುವುದು ನಿಯಮವಿದೆ. ಆದರೆ ಇದ್ಯಾವುದನ್ನು ಆಹಾರ ಸುರಕ್ಷತೆ ಪ್ರಾಧಿಕಾರ ಪಾಲಿಸಿಲ್ಲ. ಆಹಾರ ಸುರಕ್ಷತೆ ದಾಳಿ ಮಾತ್ರ: ದಸರಾ ದೀಪಾವಳಿ ಸಂದರ್ಭದಲ್ಲಿ ಮಾತ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಚ್ಚರ ಸ್ಥಿತಿಯಲ್ಲಿದ್ದು ಬೇಕರಿ ಸೇರಿದಂತೆ ಸಿಹಿ ತಿನಿಸು ತಯಾರಿಕಾ ಅಂಗಡಿಗಳ ಮೇಲೆ ದಾಳಿ ಮಾಡಿ ಆಹಾರ ವಶಪಡಿಸಿಕೊಳ್ಳುತ್ತದೆ. ನಂತರ ಪ್ರಯೋಗಾಲಯ ವರದಿ ಏನು ಬಂತು. ಆ ಸಿಹಿ ಪದಾರ್ಥ ಸೇವನೆ ಮಾಡಬೇಕಾ ಇಲ್ಲ ಎನ್ನುವ ಮಾಹಿತಿ ಇರುವುದಿಲ್ಲ ಎಂದು ಸಾರ್ವಜನಿಕರ ಆರೋಪ. ‘ಮಾವಿನ ಹಣ್ಣು ಸಿಸನ್ ಮತ್ತು ದೊಡ್ಡ ಹಬ್ಬಗಳ ಸಂದರ್ಭಗಳಲ್ಲಿ ಮಾತ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ದಾಳಿ ಮಾಡುತ್ತಾರೆ. ಅದು ಮಾತ್ರ ಪತ್ರಿಕೆಗಳಲ್ಲಿ ಪ್ರಸಾರ ಆಗುವಂತೆ ನೋಡಿಕೊಳ್ಳುತ್ತಾರೆ. ಆ ನಂತರ ಯಾವುದೇ ವರದಿ ಬರುವುದಿಲ್ಲ. ಇದರಿಂದ ಇವರು ವರ್ಷಕ್ಕೊಮ್ಮೆ ಮಾತ್ರ ದಾಳಿ ಮಾಡುತ್ತಾರೆ’ ಎನ್ನುತ್ತಾರೆ ಪಟ್ಟಣ ನಿವಾಸಿ ಗುಲಾಮ್ ಬಡಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.