ADVERTISEMENT

‘ಸೋಂಕಿತರಿಗೆ ಉತ್ತಮ ಚಿಕಿತ್ಸೆ’

ನಿಯಮ ಮೀರಿ ಅಂಗಡಿ ತೆರೆದವರ ವಿರುದ್ಧ 11 ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಮೇ 2021, 4:52 IST
Last Updated 6 ಮೇ 2021, 4:52 IST
ಬಸವಕಲ್ಯಾಣದ ರಸ್ತೆಯಲ್ಲಿ ಸ್ಯಾನಿಟೈಜ್‌ ಮಾಡುತ್ತಿರುವುದನ್ನು ಶಾಸಕ ಶರಣು ಸಲಗರ ಪರಿಶೀಲಿಸಿದರು. ನಗರಸಭೆ ಆಯುಕ್ತ ಗೌತಮಬುದ್ಧ ಕಾಂಬಳೆ ಇದ್ದರು
ಬಸವಕಲ್ಯಾಣದ ರಸ್ತೆಯಲ್ಲಿ ಸ್ಯಾನಿಟೈಜ್‌ ಮಾಡುತ್ತಿರುವುದನ್ನು ಶಾಸಕ ಶರಣು ಸಲಗರ ಪರಿಶೀಲಿಸಿದರು. ನಗರಸಭೆ ಆಯುಕ್ತ ಗೌತಮಬುದ್ಧ ಕಾಂಬಳೆ ಇದ್ದರು   

ಬಸವಕಲ್ಯಾಣ: ಉಪ ಚುನಾವಣೆಯ ಮತ ಎಣಿಕೆಯಾದ ಮರುದಿನದಿಂದಲೇ ಶಾಸಕ ಶರಣು ಸಲಗರ ಅವರು ಸಕ್ರಿಯರಾಗಿ ಕೋವಿಡ್ ನಿರ್ಮೂಲನೆಗೆ ಪ್ರಥಮ ಹೆಜ್ಜೆ ಇಟ್ಟಿದ್ದರಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಿರುವುದು ಕಂಡುಬಂದಿದೆ.

ಶಾಸಕರು ಎರಡು ದಿನ ನಗರದಲ್ಲಿ ಸಂಚರಿಸಿ ವ್ಯಾಪಾರಿಗಳಿಗೆ ಕೋವಿಡ್ ನಿಯಮಗಳ ಪಾಲನೆಗೆ ಸಲಹೆ ನೀಡಿದ್ದರು. ಅಧಿಕಾರಿಗಳ ಸಭೆ ಆಯೋಜಿಸಿ ಕೋವಿಡ್ ಕುರಿತು ಜಾಗೃತಿ ಮೂಡಿಸುವುದಕ್ಕೆ ಹಾಗೂ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರಕಿಸಿಕೊಡುವುದಕ್ಕೆ ಸತತವಾಗಿ ಶ್ರಮಿಸಲು ಕೇಳಿಕೊಂಡಿದ್ದರಿಂದ ಬುಧವಾರದ ಲಾಕ್‌ಡೌನ್‌ ಮೇಲೆ ಇದರ ಪ್ರಭಾವ ಆಗಿರುವುದು ಗಮನಕ್ಕೆ ಬಂತು.

ಪೊಲೀಸ್ ಇಲಾಖೆಯವರು ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಮಾಡಿ ಕಟ್ಟುನಿಟ್ಟಿನ ಕ್ರಮ ಅನುಸರಿಸಿದ ಕಾರಣ ಜನರ ಓಡಾಟ ಕಡಿಮೆ ಆಗಿತ್ತು. ಅಗತ್ಯ ಇದ್ದವರು ಮಾತ್ರ ಸಂಚರಿಸಿದ ಕಾರಣ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕಿರಾಣಿ ಅಂಗಡಿ, ಔಷಧದ ಅಂಗಡಿಗಳ ಎದುರಲ್ಲಿಯೂ ಕೋವಿಡ್ ನಿಯಮದ ಪ್ರಕಾರ ಜನರು ಸಾಲಾಗಿ ನಿಂತು ಖರೀದಿ ಮಾಡಿದರು.

ADVERTISEMENT

ನಗರಸಭೆಯಿಂದ ಪ್ರಮುಖ ಓಣಿಗಳಲ್ಲಿನ ರಸ್ತೆಗಳಲ್ಲಿ ಸ್ಯಾನಿಟೈಜ್ ಮಾಡಲಾಯಿತು. ಸ್ಯಾನಿಟೈಜ್‌ ಮಾಡುತ್ತಿರುವುದನ್ನು ಶಾಸಕ ಶರಣು ಸಲಗರ ಪರಿಶೀಲಿಸಿದರು. ವಾಹನಗಳನ್ನು ಅಡ್ಡಗಟ್ಟಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಯಿತು. ಪೊಲೀಸರು ಕೂಡ ನಿಯಮ ಮೀರಿ ಅಂಗಡಿಗಳನ್ನು ತೆರೆದಿಟ್ಟಿದ್ದ ಕಾರಣಕ್ಕಾಗಿ 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.