ADVERTISEMENT

ಹುಲಸೂರ | ಭಾರೀ ಮಳೆಗೆ ಬೆಳೆ, ಮನೆ ಹಾನಿ; ಉಕ್ಕಿ ಹರಿದ ಮಾಂಜ್ರಾ ನದಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:30 IST
Last Updated 17 ಆಗಸ್ಟ್ 2025, 6:30 IST
ಹುಲಸೂರ ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಗ್ರಾಮದ ವೆಂಕಟ ದಾಯಬಾಜಿ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ
ಹುಲಸೂರ ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಗ್ರಾಮದ ವೆಂಕಟ ದಾಯಬಾಜಿ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ   

ಹುಲಸೂರ: ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಪ್ರಸಕ್ತ ಮುಂಗಾರಿಗೆ ಅನ್ನದಾತ ಕಷ್ಟಪಟ್ಟು ಬೆಳೆದಿದ್ದ ಹೆಸರು, ಉದ್ದು ಬೆಳೆಗಳು ಕೈಗೆ ಬಂದರೂ ಬಾಯಿಗೆ ಬಾರದಂತಾಗಿದೆ.

ತಾಲ್ಲೂಕಿನಲ್ಲಿ ಬಿದ್ದ ಮಳೆಗೆ ಮನೆಗಳು ಕುಸಿಯತೊಡಗಿರುವುದು ಒಂದೆಡೆಯಾದರೆ, ಮಾಂಜ್ರಾ ನದಿ ತುಂಬಿ ಹರಿದು ಬೆಳೆ ನಷ್ಟಕ್ಕೀಡಾಗಿರುವುದು ಇನ್ನೊಂದೆಡೆ ಸೇರಿ ರೈತರ ಬದುಕು ದುಸ್ಥರವಾಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಧನೇಗಾಂವ್ ಜಲಾಶಯದಿಂದ 1500ಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಇದರಿಂದಾಗಿ ಮಾಂಜ್ರಾ ನದಿ ಆಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ನದಿಯ ಪಕ್ಕದ ನೂರಾರು ಎಕರೆ ಬೆಳೆ ನೀರು ಪಾಲಾಗಿದೆ.

ADVERTISEMENT

ಮಾಂಜ್ರಾ ನದಿ ಪಾತ್ರದ ಗ್ರಾಮಗಳಾದ ಹಲಸಿ ತುಗಾಂವ, ಕೊಂಗಳಿ, ವಾಂಜರಖೇಡ, ಮೆಹಕರ, ಬೋಳೆಗಾಂವ್, ನಾರದಾ ಸಂಗಮ, ಅಟ್ಟರಗಾ, ಸಾಯಗಾಂವ , ಹುಲಸೂರ ಸೇರಿ ವಿವಿಧ ಗ್ರಾಮಗಳಲ್ಲಿ ಬೆಳೆದ ಹೆಸರೂ ,ಉದ್ದು, ತೊಗರಿ, ಸೊಯಾ ಅವರೆ ಬೆಳೆಗಳು ಜಲಾವೃತವಾಗಿದ್ದು, ಕೈಗೆ ಬಂದಿದ್ದ ಬೆಳೆಗಳು ಕಣ್ಣೆದುರೆ ಮಣ್ಣುಪಾಲಾಗುತ್ತಿವೆ.

ನೌಕರರು ಮತ್ತು ಸಾರ್ವಜನಿಕರು ನಿತ್ಯ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಹೋಗಲೂ ಪರದಾಡುವಂತಾಗಿದೆ. ದಿನವಿಡಿ ಸುರಿಯುತ್ತಿರುವ ಮಳೆಯಿಂದ ಜನರಿಗೆ ಮಲೆನಾಡಿನ ಅನುಭವ ಉಂಟಾಗಿದ್ದು, ತಂಪಾದ ವಾತಾವರಣ ಹಾಗೂ ಶೀತಗಾಳಿಯಿಂದ ಜನರು ಮನೆಯಿಂದ ಹೊರಗೆ ಬರಲು ಯೋಚಿಸುವಂತಾಗಿದೆ.

ಇದೆಲ್ಲದರ ನಡುವೆಯೂ ಮಳೆಯಲ್ಲಿಯೇ ಹೋಳಾ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಸೋರುತಿವೆ ಕಚೇರಿ ಮಾಳಿಗೆ

ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿನ ಹಳ್ಳಕೊಳ್ಳಗಳು ಭರ್ತಿಯಾಗಿ ಅನೇಕ ಕಡೆಗಳಲ್ಲಿ ರಸ್ತೆ ಹದಗೆಟ್ಟಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಪಟ್ಟಣದ ತಹಶೀಲ್ದಾರ್‌ ಕಚೇರಿ ಸೇರಿ ವಿವಿಧ ಇಲಾಖೆಯ ಹಳೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು ಆತಂಕ ಸೃಷ್ಟಿಸಿವೆ. ಮೇವಿಗೂ ತತ್ವಾರ ಮಳೆಯಿಂದಾಗಿ ರೈತರು ಜಾನುವಾರುಗಳ ಮೇವಿಗೂ ಹೆಣಗಬೇಕಾಗಿದೆ.ಹೊಲ–ಗದ್ದೆಗಳೆಲ್ಲಾ ನೀರುಮಯವಾಗಿದ್ದು ಎಲ್ಲಿಯೂ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ.

4 ಮನೆ ಗೋಡೆ ಕುಸಿತ

ರಾತ್ರಿ ಸುರಿದ ಮಳೆಗೆ ಹಾಲಹಳ್ಳಿ ಗ್ರಾಮದ ವೆಂಕಟ ದಾಯಬಾಜಿ ಗೋರಟಾ (ಬಿ) ಬೇಲೂರ ಗ್ರಾಮದ ಮನೆಗಳು ಸೇರಿ ಒಂದೇ ದಿನ ಒಟ್ಟು 4 ಮನೆಗಳ ಗೋಡೆ ಕುಸಿದಿವೆ. ಸ್ಥಳಕ್ಕೆ ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ತಾಲ್ಲೂಕಿನ ಎಲ್ಲ ಕಂದಾಯ ನಿರೀಕ್ಷಕರಿಗೆ ಮಳೆ ಹಾನಿ ಕುರಿತು ತಕ್ಷಣ ವರದಿ ಕೊಡಲು ಸೂಚನೆ ನೀಡಲಾಗಿದೆ. ಇಲ್ಲಿಯತನಕ ಯಾವುದೇ ಮನೆ ಪೂರ್ಣವಾಗಿ ಬಿದ್ದಿಲ್ಲ. ಹಳೆ ಮನೆ ಗೋಡೆ ಭಾಗಶಃ ಬಿದ್ದಿವೆ. ಮಹಾರಾಷ್ಟ್ರದ ಧನೆಗಾಂವದಿಂದ ಮಾಂಜ್ರಾ ನದಿಗೆ ನೀರು ಬಿಡಲಾಗುತ್ತಿದ್ದು ನದಿ ಪಾತ್ರದ ಗ್ರಾಮಗಳ ರೈತರು ಜನ ಜಾನುವಾರುಗಳಿಗೆ ಎಚ್ಚರಿಕೆ ವಹಿಸಲು ಡಂಗುರ ಸಾರಲಾಗಿದೆ. ಶಿವಾನಂದ ಮೇತ್ರೆ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.