ADVERTISEMENT

ಕೋಟಿ ಖರ್ಚಾದರೂ ಸಿಗದ ವಸತಿ ಸೌಲಭ್ಯ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಬಳಕೆಯಾಗದ ಕಟ್ಟಡ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:33 IST
Last Updated 24 ಜೂನ್ 2025, 16:33 IST
ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಿರ್ಮಿಸಲಾದ ವಸತಿ ನಿಲಯ ಕಟ್ಟಡದ ಸುತ್ತ ಹುಲ್ಲು ಮುಳ್ಳಿನ ಕಂಟಿ ಬೆಳೆದಿದೆ
ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಿರ್ಮಿಸಲಾದ ವಸತಿ ನಿಲಯ ಕಟ್ಟಡದ ಸುತ್ತ ಹುಲ್ಲು ಮುಳ್ಳಿನ ಕಂಟಿ ಬೆಳೆದಿದೆ   

ಔರಾದ್: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಿರ್ಮಿಸಲಾದ ವಸತಿ ನಿಲಯ ಕಟ್ಟಡ ಬಳಕೆಯಾಗದೆ ಹಾಳಾಗುತ್ತಿದೆ.

ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಪಾಲಿಟೆಕ್ನಿಕ್ ಕಾಲೇಜಿಗೆ ಬರುವ ಬಡ ವಿದ್ಯಾರ್ಥಿಗಳಿಗೆ ಅಭ್ಯಾಸದ ಜತೆ ಉಳಿದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಿದೆ. 2023ನೇ ಸಾಲಿನಲ್ಲಿ ನಿರ್ಮಾಣ ಆದ ಈ ವಸತಿ ನಿಲಯ ಕಟ್ಟಡ ಇಂದಿಗೂ ಬಳಕೆಯಾಗದೆ ಸುತ್ತಲೂ ಮುಳ್ಳುಕಂಟಿ ಬೆಳೆದು ಒಳಗೆ ಹೋಗಲು ಭೀತಿಯಾಗುತ್ತಿದೆ.

ರೈಟ್ಸ್ (Raites) ಸಂಸ್ಥೆಯವರು ಈ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಆದರೆ ವಿದ್ಯುತ್, ಕುಡಿಯುವ ನೀರು, ಅಲ್ಲಿಗೆ ಹೋಗಲು ರಸ್ತೆ ಇಲ್ಲದ ಕಾರಣ ಅದು ಬಳಕೆಗೆ ಯೋಗ್ಯವಲ್ಲ. ಅದೆಲ್ಲ ಪೂರ್ಣ ಮಾಡಿಕೊಟ್ಟರೆ ಕಟ್ಟಡ ಹಸ್ತಾಂತರ ಮಾಡಿಕೊಳ್ಳುವುದಾಗಿ ಸಂಬಂಧಿತ ಸಂಸ್ಥೆಯವರಿಗೆ ತಾವು ತಿಳಿಸಿರುವುದಾಗಿ ಪ್ರಾಂಶುಪಾಲ ಸಂಜೀವಕುಮಾರ ಹೇಳಿದ್ದಾರೆ.

ADVERTISEMENT

ಈ ವಸತಿ ನಿಲಯ ಕಟ್ಟಡ ಬಳಸಲು ಅನುವು ಮಾಡಿಕೊಟ್ಟರೆ ಪಾಲಿಟೆಕ್ನಿಕ್ ಓದುವ ವಿದ್ಯಾರ್ಥಿಗಳಿಗೆ ಅಲ್ಲಿ ಇಲಾಖೆಯಿಂದ ಉಳಿದುಕೊಳ್ಳಲು ವ್ಯವಸ್ಥೆ ಮಾಡುವುದಾಗಿ ಹಿಂದುಳಿದ ವರ್ಗಗಳ ಇಲಾಖೆ ತಾಲ್ಲೂಕು ಅಧಿಕಾರಿ ರವೀಂದ್ರ ಮೇತ್ರೆ ತಿಳಿಸಿದ್ದಾರೆ.

ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ವಸತಿ ನಿಲಯ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ನಾವು ಹೋರಾಟ ಮಾಡುವುದಾಗಿ ರಾಷ್ಟ್ರೀಯ ಅಹಿಂದ ವಿದ್ಯಾರ್ಥಿ ಒಕ್ಕೂಟ ಪ್ರಮುಖರು ಈಚೆಗೆ ತಹಶೀಲ್ದಾರ್ ಮಹೇಶ ಪಾಟೀಲ ಅವರಿಗೆ ಅವರಿಗೆ ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ್ದಾರೆ.

‘ಔರಾದ್ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಊರು ಬಿಟ್ಟು ಹೊರಗೆ ಇದೆ. ಅಲ್ಲಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಈ ಕಾರಣಕ್ಕಾಗಿ ಎರಡು ವರ್ಷದಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಕಾಲೇಜಿನ ಆವರಣದಲ್ಲಿನ ಕಟ್ಟಡದಲ್ಲಿ ವಸತಿ ನಿಲಯ ವ್ಯವಸ್ಥೆ ಮಾಡಿದರೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಜಾಸ್ತಿಯಾಗುತ್ತದೆ’ ಎನ್ನುತ್ತಾರೆ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರು.

ಹೊಸ ವಸತಿ ನಿಲಯ ಕಟ್ಟಡದಲ್ಲಿ ವಿದ್ಯುತ್ ನೀರು ಹಾಗೂ ರಸ್ತೆ ಸೌಲಭ್ಯ ಇಲ್ಲದ ಕಾರಣ ಅದು ಬಳಸುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ.
ಸಂಜೀವಕುಮಾರ ಪ್ರಾಂಶುಪಾಲರು

₹11 ಕೋಟಿ ಮೊತ್ತದ ಕಟ್ಟಡ

‘ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ರೈಟ್ಸ್ (Raites) ಸಂಸ್ಥೆಯಿಂದ ₹ 11 ಕೋಟಿ ಮೊತ್ತದಲ್ಲಿ ಕಾಲೇಜು ಕಟ್ಟಡ ವರ್ಕ್‌ಶಾಪ್‌ ಹಾಗೂ ವಸತಿ ನಿಲಯ ಕಟ್ಟಡ ನಿರ್ಮಾಣ ಆಗಿದೆ. 2023ರ ಮೇನಲ್ಲೇ ಕಾಮಗಾರಿ ಮುಗಿದಿದೆ. ಕ್ರಿಯಾ ಯೋಜನೆ ಪ್ರಕಾರ ಏನು ಕೆಲಸ ಮಾಡಬೇಕು ಅದನೆಲ್ಲ ಮಾಡಿದ್ದೇವೆ. ಆದರೆ ಕಾಲೇಜಿನವರು ಹಸ್ತಾಂತರ ಮಾಡಿಕೊಳ್ಳಲು ತಯಾರಿಲ್ಲ’ ಎಂದು ರೈಟ್ಸ್ ಸಂಸ್ಥೆಯ ಮೇಲ್ವಿಚಾರಕ ಧನರಾಜ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.