ADVERTISEMENT

ಚಿಟಗುಪ್ಪ: ಪ್ರಾಣಿಗಳ ದಾಹ ತೀರಿಸುವ ನೀರಿನ ತೊಟ್ಟಿಗಳು

ಕರಕನ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ನೀರಿನ ತೊಟ್ಟಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 7:19 IST
Last Updated 25 ಏಪ್ರಿಲ್ 2025, 7:19 IST
<div class="paragraphs"><p>ಚಿಟಗುಪ್ಪ ತಾಲ್ಲೂಕಿನ ಕರಕನ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ನೀರಿನ ತೊಟ್ಟಿ</p></div>

ಚಿಟಗುಪ್ಪ ತಾಲ್ಲೂಕಿನ ಕರಕನ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ನೀರಿನ ತೊಟ್ಟಿ

   

ಚಿಟಗುಪ್ಪ (ಹುಮನಾಬಾದ್): ಬಿಸಿಲು ಹೆಚ್ಚಿರುವುದರಿಂದ ಮನುಷ್ಯರಷ್ಟೇ ಅಲ್ಲದೆ ಕಾಡುಪ್ರಾಣಿಗಳು ಕಂಗೆಟ್ಟಿದ್ದು ಕುಡಿಯಲು ನೀರು ಅರಸುತ್ತ ಜನವಸತಿ ಪ್ರದೇಶಗಳತ್ತ ನುಗ್ಗುತ್ತಿವೆ. ಇದರ ತಡೆಗೆ ಅರಣ್ಯ ಇಲಾಖೆ ಕಾಡಿನಲ್ಲೇ ನೀರಿನ ತೊಟ್ಟಿಗಳನ್ನು ನಿರ್ಮಿಸಿದೆ.‌

ಕಳೆದ ಒಂದು ವಾರದಿಂದ ಹುಮನಾಬಾದ್ ಮತ್ತು ಚಿಟಗುಪ್ಪ ತಾಲ್ಲೂಕಿನ ಬಿಸಲಿನ ಪ್ರಖರತೆ 38 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.‌ ತಾಲ್ಲೂಕಿನಲ್ಲಿ ಸದ್ಯ ಜಲಮೂಲ ಬತ್ತಿ ಹೋಗಿ ಜನ, ಜಾನುವಾರು, ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಈ ನಡುವೆ ಅರಣ್ಯ ಇಲಾಖೆಯವರು ನಡೆಸುತ್ತಿರುವ ಪ್ರಾಣಿ ಮತ್ತು ಪಕ್ಷಿಗಳ ದಾಹ ನೀಗಿಸುವ ಮಹತ್ವದ ಕೆಲಸದಿಂದ ವನ್ಯಜೀವಿಗಳಿಗೆ ಆಸರೆಯಾಗಿದೆ.

ADVERTISEMENT

ತಾಲ್ಲೂಕಿನಲ್ಲಿ ಸುಮಾರು 2 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿ ಜಿಂಕೆ, ನವಿಲು, ಕೃಷ್ಣಮೃಗ, ನರಿ, ಕಾಡು ಹಂದಿ, ಮುಳ್ಳಹಂದಿ, ತೋಳದಂತಹ ಪ್ರಾಣಿ ಹಾಗೂ ಪಕ್ಷಿಗಳಿವೆ. ಬೇಸಿಗೆಯಲ್ಲಿ ಇವುಗಳಿಗೆ ಕುಡಿಯಲು ನೀರಿನ ಕೊರತೆಯಾಗಿ ವಲಸೆ ಹೋಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ನೀರು ಸಂಗ್ರಹ ತೊಟ್ಟಿ ವ್ಯವಸ್ಥೆ ಮಾಡಿದೆ.

ತಾಲ್ಲೂಕಿನ ಕರಕನ್ನಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ 10 ಅಡಿ ಆಳ ಮತ್ತು 3 ಮೀಟರ್ ಸುತ್ತಳತೆಯ ಗುಂಡಿ ತೋಡಲಾಗಿದೆ. ಇಲ್ಲಿ ನಾಲ್ಕು ದಿನಕ್ಕೊಮ್ಮೆ ಒಂದೊಂದು ತೊಟ್ಟಿಯಲ್ಲಿ 7 ಸಾವಿರ ಲೀಟರ್ ನೀರು ಹಾಕಲಾಗುತ್ತದೆ. ಈ ತೊಟ್ಟಿಯಲ್ಲಿನ ನೀರು ಕುಡಿಯಲು ನಿತ್ಯವೂ ಪ್ರಾಣಿಗಳು ಬರುತ್ತಿವೆ ಎಂದು ಚಿಟಗುಪ್ಪ ವಲಯ ಅರಣ್ಯಾಧಿಕಾರಿ ಶ್ರೀಕಾಂತ ರಾಠೋಡ್ ತಿಳಿಸಿದರು.

ಕಳೆದ ಎರಡು ವರ್ಷದಿಂದ ಈ ರೀತಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದು ಸಾಕಷ್ಟು ಅನುಕೂಲವಾಗಿದೆ. ಪ್ರಾಣಿಗಳು ವಲಸೆ ಹೋಗುವುದು, ಗ್ರಾಮಗಳಲ್ಲಿ ಬಂದು ಜನರಿಗೆ ತೊಂದರೆ ಕೊಡುವುದು ತಪ್ಪಿದೆ ಎಂದು ಅವರು ಹೇಳಿದ್ದಾರೆ.

ಕರಕನ್ನಳಿ ಅರಣ್ಯ ಪ್ರದೇಶದ ಮೂರು ಕಡೆ ಇಂತಹ ನೀರು ಸಂಗ್ರಹ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಲ್ಕು ಕಡೆ ಈ ರೀತಿ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಾಗಿದೆ. ಮುಂದಿನ ಬೇಸಿಗೆ ವೇಳೆ ದೇವಗಿರಿ, ತಾಳಮಡಗಿ , ಶಾಮತಬಾದ್ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರು ಕುಡಿಯುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.