ADVERTISEMENT

ಬಿಜೆಪಿ ಅಭ್ಯರ್ಥಿಗೆ ಕರೆ ಮಾಡಿ ಅಭಿನಂದಿಸಿಲ್ಲ: ಈಶ್ವರ ಖಂಡ್ರೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:58 IST
Last Updated 5 ಡಿಸೆಂಬರ್ 2021, 5:58 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ‘ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಅವರ ಹೆಸರು ಘೋಷಿಸಿದ ಬಳಿಕ, ಅವರಿಗೆ ಕರೆ ಮಾಡಿ ಅಭಿನಂದಿಸಿರುವುದಾಗಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದರು.

‘ಕೇಂದ್ರ ಸಚಿವರಾಗಿ ಹುಸಿ ಹೇಳಿಕೆ ನೀಡಿದ್ದು ಖಂಡನೀಯ. ಒಂದು ವೇಳೆ ನಾನು ಕರೆ ಮಾಡಿ ಅಭಿನಂದಿಸಿದ್ದರೆ, ಅದನ್ನು ಬಿಜೆಪಿ ಅಭ್ಯರ್ಥಿ ಬಾಯಿಂದಲೇ ಹೇಳಿಸಬಹುದಿತ್ತಲ್ಲವೇ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಪ್ರಕಾಶ ಖಂಡ್ರೆ ಅವರು ನಮ್ಮ ಪಕ್ಷದಲ್ಲೇ ಇದ್ದು, ನಮ್ಮ ತಂದೆಯ ಸಹಕಾರದಿಂದ ಬೆಳೆದವರು. ನಮ್ಮ ಪರಿವಾರಕ್ಕೆ ದ್ರೋಹ ಬಗೆದು, ಬೆನ್ನಿಗೆ ಚೂರಿ ಹಾಕಿ ಬಿಜೆಪಿಗೆ ಸೇರಿದ್ದಾರೆ. ಇದಾದ ಬಳಿಕ ನಮ್ಮ ಹಾಗೂ ಅವರ ಕುಟುಂಬದ ನಡುವೆ ಯಾವುದೇ ಬಾಂಧವ್ಯ ಇಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಸೋಲಿನ ಭೀತಿಯಿಂದ ಖೂಬಾ ಹುಸಿ ಹೇಳಿಕೆ ನೀಡುವ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಕೀಳುಮಟ್ಟದ ರಾಜಕೀಯ ಮಾಡುವುದನ್ನು ಕೈ ಬಿಡಬೇಕು’ ಎಂದು ಅವರು ತಿಳಿಸಿದರು.

‘ಪ್ರಕಾಶ ಖಂಡ್ರೆ ಅವರು ಬಿಜೆಪಿ ಅಭ್ಯರ್ಥಿಯಾಗುವ ಮೊದಲೇ ಭೀಮರಾವ್ ಪಾಟೀಲ ಅವರು ಚುನಾವಣೆಗೆ ನಿಲ್ಲಲು ಸಿದ್ಧ ಎಂದಿದ್ದರು. ಹೀಗಾಗಿ ಹೈಕಮಾಂಡ್ ಮನವೊಲಿಸಿ ಅವರನ್ನು ಕಣಕ್ಕೆ ಇಳಿಸಲಾಯಿತು. ಇಲ್ಲಿ ಕುಟುಂಬ ಒಡೆದದ್ದು ನಾನಾ, ಖೂಬಾ ಎಂಬುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ಖಂಡ್ರೆ ಅವರು ಕುಟುಂಬ ಒಡೆಯುತ್ತಿದ್ದಾರೆ ಎನ್ನುತ್ತಿರುವ ಅವರು, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಜಾತಿ ಮತ್ತು ಧರ್ಮಗಳ ಮಧ್ಯೆ ಗಲಾಟೆ ತಂದಿಟ್ಟು ಸೌಹಾರ್ದಕ್ಕೆ ಧಕ್ಕೆ ತರುತ್ತಿದೆ. ಇಡೀ ದೇಶವನ್ನೇ ವಿಭಜನೆ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.

‘ಚುನಾವಣೆಯಲ್ಲಿ ಬಿಜೆಪಿಯವರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಆದರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವರು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ರಾಜಶೇಖರ ಪಾಟೀಲ, ರಹೀಂಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಇದ್ದರು.

*ಭಗವಂತ ಖೂಬಾ- ನನ್ನ ಸಂಬಂಧ ಚೆನ್ನಾಗಿದ್ದಾಗ ಅವರೇ ನನಗೊಂದು ಕನ್ನಡಕ ಉಡುಗೊರೆಯಾಗಿ ಕೊಟ್ಟಿದ್ದರು. ಅದರ ಬೆಲೆ ಎಷ್ಟು ಎಂಬುದನ್ನು ಅವರನ್ನೇ ಕೇಳಿ

-ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.