ADVERTISEMENT

ಐವರಿಗೆ ಜೈಲು, ಇಬ್ಬರು ದೋಷಮುಕ್ತ

ಕಾನೂನುಬಾಹಿರವಾಗಿ ಮತ್ತಿನ ಡ್ರಗ್ಸ್‌, ಗುಳಿಗೆ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 6:19 IST
Last Updated 14 ಮಾರ್ಚ್ 2024, 6:19 IST

ಬೀದರ್‌: ನಗರದ ಕೊಳಾರ (ಕೆ) ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಮತ್ತಿನ ಗುಳಿಗೆ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯವು ಐದು ಜನರಿಗೆ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ತೆಲಂಗಾಣದ ಹೈದರಾಬಾದ್‌ನ ಸೇಗಬಂಧಿ ಭಾಸ್ಕರಚಾರಿ, ವಿಜಯರೆಡ್ಡಿ ಬಜಾರೆಡ್ಡಿ, ಎನ್‌. ವೆಂಕಟೇಶ್‌ ರೆಡ್ಡಿ ಎಂಬುವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ.ಆನಂದ ಶೆಟ್ಟಿ ಅವರು 12 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ ಒಂದು ಲಕ್ಷ ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಬೇಕೆಂದು ಮಾರ್ಚ್‌ 5ರಂದು ಆದೇಶದಲ್ಲಿ ತಿಳಿಸಿದ್ದಾರೆ.

ಸಂಗಾರೆಡ್ಡಿಯ ಅಮೃತ್‌ ಗಂದಗೆ, ಸತೀಶ ಮೆನನ್‌ ಅವರಿಗೆ ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ ₹1 ಲಕ್ಷ ದಂಡ, ದಂಡ ಪಾವತಿಸಲು ಆಗದಿದ್ದಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆ ನೀಡಬೇಕೆಂದು ಆದೇಶ ನೀಡಿದ್ದಾರೆ. ಇಬ್ಬರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಅವರನ್ನು ದೋಷಮುಕ್ತಗೊಳಿಸಿದೆ.

ADVERTISEMENT

ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯುರೊ ಪರ ಅನಿಲಕುಮಾರ್‌ ಬಿರಾದಾರ ವಾದ ಮಂಡಿಸಿದ್ದಾರೆ.


ಆಗಿದ್ದೇನು?:
2021ರ ಜೂನ್‌ 25ರಂದು ಬೆಂಗಳೂರಿನ ಎನ್‌ಸಿಬಿ ತಂಡವು ನಗರದ ಕೊಳಾರ (ಕೆ) ಕೈಗಾರಿಕಾ ಪ್ರದೇಶದ ‘ಎವರಗ್ರೀನ್‌ ಆರ್ಗ್ಯಾನಿಕ್‌’ ಕೈಗಾರಿಕೆ ಮೇಲೆ ದಾಳಿ ನಡೆಸಿ ₹3 ಲಕ್ಷ ಮೌಲ್ಯದ 91.455 ಕೆ.ಜಿ ಮತ್ತು ಬರಿಸುವ ‘ಅಲ್ಫ್ರಝೋಲಂ’, ‘ಸೈಕೋಟ್ರೋಪಿಕ್‌’ ನಾರ್ಕೊಟಿಕ್‌ ಹಾಗೂ ಆರೋಪಿಗಳಿಂದ ₹61.93 ಲಕ್ಷ ನಗದು ಜಪ್ತಿ ಮಾಡಿತ್ತು. ಏಳು ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು

‘ಕಾನೂನುಬಾಹಿರವಾಗಿ ನಾರ್ಕೊಟಿಕ್‌ ಡ್ರಗ್ಸ್ ತಯಾರಿಸಿ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಜಪ್ತಿ ಮಾಡಿಕೊಂಡಿರುವ ಡ್ರಗ್ಸ್‌ ಮನುಷ್ಯನ ದೇಹಕ್ಕೆ ಸೇರಿದ ನಂತರ ನರಗಳು ನಿಶ್ಯಕ್ತಗೊಂಡು, ಪಾರ್ಶ್ವವಾಯು ಬರಬಹುದು. ನರಗಳಲ್ಲಿ ರಕ್ತ ಸಂಚಲನೆಗೆ ತೊಂದರೆ ಉಂಟಾಗುತ್ತದೆ. ಸೇಂದಿ ತಯಾರಿಕೆ, ಮತ್ತು ಹಾಗೂ ನಿದ್ರೆ ಗುಳಿಗೆ ತಯಾರಿಸಲು ಈ ಡ್ರಗ್ಸ್‌ ಬಳಸಲಾಗುತ್ತದೆ’ ಎಂದು ಅನಿಲಕುಮಾರ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.