ADVERTISEMENT

ವಸತಿ ಯೋಜನೆ; ಬಹಿರಂಗ ಚರ್ಚೆಗೆ ಸಿದ್ಧ: ನಳಿನ್‌ಕುಮಾರ್ ಕಟೀಲ್‍ಗೆ ಖಂಡ್ರೆ ಸವಾಲು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 5:24 IST
Last Updated 21 ಅಕ್ಟೋಬರ್ 2020, 5:24 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಭಾಲ್ಕಿ: ‘ವಸತಿ ಯೋಜನೆಯ ಮನೆಗಳ ವಿಚಾರವಾಗಿ ಯಾವುದೇ ಆಧಾರ ಇಲ್ಲದೇ ಗಾಳಿಯಲ್ಲಿ ಗುಂಡು ಹೊಡೆದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನನ್ನ ವಿರುದ್ಧ ಹೇಳಿಕೆ ನೀಡಿ ದ್ವೇಷದ ರಾಜಕಾರಣಕ್ಕೆ ಮುಂದಾಗಿರುವುದು ಖಂಡನೀಯ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಭಿವೃದ್ಧಿ ಸಹಿಸದ ಸ್ಥಳೀಯ ಬಿಜೆಪಿ ಮುಖಂಡರು ಇಲ್ಲಸಲ್ಲದ ಅರೋಪ ಮಾಡುತ್ತ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ವಸತಿ ಮನೆಗಳು ಸರ್ಕಾರದ ಮಾರ್ಗಸೂಚಿಯಂತೆ ಪಾರದರ್ಶಕವಾಗಿ ಹಂಚಿಕೆ ಆಗಿವೆ. ಆದರೆ, ಸತ್ಯಾಂಶ ಅರಿಯದೇ ಬಿಜೆಪಿ ರಾಜ್ಯಾಧ್ಯಕ್ಷರಾದವರೂ ನನ್ನ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ’ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

‘ತಾಲ್ಲೂಕಿನಲ್ಲಿ ವಿವಿಧ ವಸತಿ ಯೋಜನೆಯಡಿ ಹಂಚಿಕೆಯಾದ ಮನೆಗಳ ಬಗ್ಗೆ ಪದೇಪದೇ ಆರೋಪ ಕೇಳಿ ಬರುತ್ತಿದೆ. ಮನೆಗಳ ವಿಷಯವಾಗಿ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಕಟೀಲ್ ಅವರಿಗೆ ನೈತಿಕತೆ, ಪ್ರಾಮಾಣಿಕತೆ ಇದ್ದರೇ ಚರ್ಚೆಗೆ ಮುಂದೆ ಬರಲಿ’ ಎಂದು ಸವಾಲು ಹಾಕಿದ್ದಾರೆ.

ADVERTISEMENT

‘ತಾಲ್ಲೂಕು ಸೇರಿ ರಾಜ್ಯದಾದ್ಯಂತ ವಿವಿಧ ವಸತಿ ಯೋಜನೆಯಡಿ ಮಂಜೂರಾದ ವಸತಿ ಮನೆಗಳ ಹಣಕ್ಕೆ ಬಿಜೆಪಿ ಸರ್ಕಾರ ತಡೆ ಹಿಡಿದು ಸೇಡಿನ ರಾಜಕಾರಣ ಮಾಡುತ್ತಿದೆ. ನಳಿನ್‌ಕುಮಾರ್ ಅವರಿಗೆ ಬಡವರ ಬಗ್ಗೆ ನಿಜವಾದ ಕಾಳಜಿ ಇದ್ದರೇ ತಡೆ ಹಿಡಿದ ವಸತಿ ಮನೆಗಳ ಹಣ ಬಿಡುಗಡೆ ಮಾಡಿಸಲಿ. ಫಲಾನುಭವಿಗಳು ಸಾಲ ಮಾಡಿಕೊಂಡು ಕಟ್ಟಿಕೊಂಡ ಮನೆಗಳು ಅರ್ಧಕ್ಕೆ ನಿಂತಿವೆ. ಇನ್ನಾದರೂ ಸತ್ಯಾಂಶ ಅರ್ಥ ಮಾಡಿಕೊಂಡು ನೆರೆ ಸಂತ್ರಸ್ತರಿಗೆ ನೆರವಾಗುವ ಕೆಲಸ ಮಾಡಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.