ADVERTISEMENT

ನಿಮ್ಮೊಂದಿಗೆ ನಾವಿದ್ದೇವೆ; ಆತಂಕ ಬೇಡ

ಕಾರ್ಮಿಕರಿಗೆ ಆಹಾರಧಾನ್ಯದ ಕಿಟ್ ವಿತರಿಸಿದ ಶಾಸಕ ಈಶ್ವರ ಖಂಡ್ರೆ ಅಭಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 6:42 IST
Last Updated 4 ಜುಲೈ 2021, 6:42 IST
ಭಾಲ್ಕಿಯ ಎಪಿಎಂಸಿ ಪ್ರಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಶಾಸಕ ಈಶ್ವರ ಖಂಡ್ರೆ ಅವರು ಕಾರ್ಮಿಕರಿಗೆ ಆಹಾರಧಾನ್ಯದ ಕಿಟ್ ವಿತರಿಸಿದರು
ಭಾಲ್ಕಿಯ ಎಪಿಎಂಸಿ ಪ್ರಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಶಾಸಕ ಈಶ್ವರ ಖಂಡ್ರೆ ಅವರು ಕಾರ್ಮಿಕರಿಗೆ ಆಹಾರಧಾನ್ಯದ ಕಿಟ್ ವಿತರಿಸಿದರು   

ಭಾಲ್ಕಿ: ‘ಕೋವಿಡ್ ಹೊಡೆತಕ್ಕೆ ಜನರ ಜೀವ ಮತ್ತು ಜೀವನೋಪಾಯಕ್ಕೂ ಧಕ್ಕೆ ಆಗಿದೆ. ಕಾರ್ಮಿಕರು, ಬಡಜನರು ತಮ್ಮ ಕೆಲಸ ಕಳೆದುಕೊಂಡು ಬೀದಿಗೆ ಬರುವಂತಾಯಿತು. ಯಾರು ಆತಂಕಪಡಬೇಕಿಲ್ಲ. ನಿಮ್ಮ ಜತೆಗೆ ನಾವಿದ್ದೇವೆ’ ಎಂದು ಶಾಸಕ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಶನಿವಾರ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದರು.

‘ಕಾರ್ಮಿಕರು ಸುರಕ್ಷಾ ಕಿಟ್‍ನೊಂದಿಗೆ ಕೆಲಸ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್, ಸಾನಿಟೈಸರ್ ಬಳಸಿಕೊಂಡು ತಮ್ಮ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದರು.

ADVERTISEMENT

‘ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕರ ನೋಂದಣಿ ಸೇರಿ ವಿವಿಧ ಯೋಜನೆ ಜಾರಿಗೊಳಿಸಿತ್ತು. ಕಳೆದ ವರ್ಷದ ಲಾಕ್‍ಡೌನ್ ಅವಧಿಯಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ಹೋರಾಟ ನಡೆಸಿದರ ಪರಿಣಾಮ ಕಾರ್ಮಿಕರ ಖಾತೆಗೆ ತಲಾ ₹5 ಸಾವಿರ ಜಮಾ ಆಗಿದ್ದವು. ಆದರೆ, ಈ ಬಾರಿ ಕಾರ್ಮಿಕರ ಖಾತೆಗೆ ₹3 ಸಾವಿರ ನೀಡುತ್ತಿರುವುದು ಸರಿಯಲ್ಲ. ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಕಾರ್ಮಿಕರಿಗೆ ಕನಿಷ್ಠ ₹10 ಸಾವಿರ ನೀಡುವಂತೆ ಒತ್ತಡ ಹೇರುವುದಾಗಿ’ ಭರವಸೆ ನೀಡಿದರು.

‘ಲಾಕ್‍ಡೌನ್ ಅವಧಿಯಲ್ಲಿ ಸುಮಾರು 7 ಸಾವಿರ ಬಡ ಜನರಿಗೆ ವೈಯಕ್ತಿಕವಾಗಿ ಆಹಾರ ಧಾನ್ಯದ ಕಿಟ್ ವಿತರಿಸಿ ನೆರವಾಗಿದ್ದೇನೆ. ತಾಲ್ಲೂಕಿನಲ್ಲಿ 36 ಸಾವಿರ ನೋಂದಾಯಿತ ಕಾರ್ಮಿಕರಿದ್ದಾರೆ. ಅಷ್ಟು ಜನರಿಗೂ ಆಹಾರದ ಕಿಟ್ ನೀಡುವಂತೆ ಕಾರ್ಮಿಕ ಇಲಾಖೆ, ಸಚಿವರಿಗೆ ಒತ್ತಾಯ ಮಾಡಿದ್ದೇನೆ. ಅವರು ಸದ್ಯ 10 ಸಾವಿರ ಕಿಟ್ ನೀಡುವುದಾಗಿ ತಿಳಿಸಿದ್ದಾರೆ. ಶನಿವಾರ 2,400 ಕಾರ್ಮಿಕರಿಗೆ ಆಹಾ ರದ ಕಿಟ್ ನೀಡಲಾಗಿದೆ’ ಎಂದರು.

ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಎಪಿಎಂಸಿ ಅಧ್ಯಕ್ಷ ಬನಸಿಲಾಲ್ ಭೋರಾಳೆ, ಪುರಸಭೆ ಸದಸ್ಯರಾದ ಓಂಕಾರ ಮೋರೆ, ಅಶೋಕ ಗಾಯಕವಾಡ್, ಮಾಣಿಕಪ್ಪ ರೇಷ್ಮೆ, ಶೇಖರ ವಂಕೆ, ರಾಜಕುಮಾರ ಮೊರೆ, ಟಿಂಕು ರಾಜಭವನ, ಜೈಪಾಲ ಭೋರಾಳೆ, ಡಿವೈಎಸ್ಪಿ ಡಾ.ದೇವರಾಜ ಬಿ, ಕಾರ್ಮಿಕ ಇಲಾಖೆ ಪ್ರಾದೇಶಿಕ ಆಯುಕ್ತ ನಾಗೇಶ್, ಅಧಿಕಾರಿಗಳಾದ ಸುವರ್ಣಾ, ಆರತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.