ADVERTISEMENT

ಭಾಲ್ಕಿ: ‘ರೈತರಿಗೆ ಸೂಕ್ತ ಪರಿಹಾರ ನೀಡಿ’

ಬೀದರ್ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಖಂಡ್ರೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:44 IST
Last Updated 4 ಅಕ್ಟೋಬರ್ 2021, 4:44 IST
ಭಾಲ್ಕಿ ತಾಲ್ಲೂಕಿನ ಚಂದಾಪುರ ಬ್ಯಾರೆಜ್‌ಗೆ ಶಾಸಕ ಈಶ್ವರ ಖಂಡ್ರೆ ‌ಭೇಟಿ ನೀಡಿ ಬೆಳೆಹಾನಿ ಮಾಹಿತಿ ಪಡೆದುಕೊಂಡರು
ಭಾಲ್ಕಿ ತಾಲ್ಲೂಕಿನ ಚಂದಾಪುರ ಬ್ಯಾರೆಜ್‌ಗೆ ಶಾಸಕ ಈಶ್ವರ ಖಂಡ್ರೆ ‌ಭೇಟಿ ನೀಡಿ ಬೆಳೆಹಾನಿ ಮಾಹಿತಿ ಪಡೆದುಕೊಂಡರು   

ಭಾಲ್ಕಿ: ತಾಲ್ಲೂಕಿನ ವಿವಿಧಡೆ ಅತಿವೃಷ್ಟಿಯಿಂದ ಹಾನೀಗಿಡಾದ ಪ್ರದೇಶಗಳಿಗೆ ಭಾನುವಾರ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಹಾನಿ ಮಾಹಿತಿ ಕಲೆ ಹಾಕಿದರು.

ಬೀರಿ(ಕೆ), ಮುರಾಳ, ಕೊಟಗ್ಯಾಳ, ನಿಟ್ಟೂರು(ಬಿ), ಚಂದಾಪೂರ್, ಕೋಸಂ ಸೇರಿದಂತೆ ಮುಂತಾದ ಕಡೆಗಳಲ್ಲಿ ರೈತರ ಹೊಲಗಳಿಗೆ ಶಾಸಕರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಬೆಳೆಹಾನಿ ಮಾಹಿತಿ
ಪಡೆದು ಕೊಂಡರು.

ಜತೆಗೆ ಮಾರ್ಗ ಮಧ್ಯದ ರಸ್ತೆ, ಸೇತುವೆ ಹಾನಿಗೀಡಾಗಿರುವುದನ್ನು ವೀಕ್ಷಿಸಿದರು. ಇದರ ಜತೆಗೆ ನಿಟ್ಟೂರು(ಬಿ) ಮತ್ತು ಚಂದಾಪೂರ್ ಬ್ಯಾರೇಜ್ ಗಳಿಗೆ ಭೇಟಿ ನೀಡಿದ ಅವರು ರೈತರು ಮುಂಗಾರಿನಲ್ಲಿ ಬೆಳೆದ ಬೆಳೆಗಳು ನೀರಿನಲ್ಲಿ ಜಲಾವೃತಗೊಂಡಿರುವುದನ್ನು ಕಣ್ಣಾರೆ ವೀಕ್ಷಿಸಿದರು.

ADVERTISEMENT

ಬಳಿಕ ಮಾತನಾಡಿದ ಅವರು, ತಾಲ್ಲೂಕು ಸೇರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿ ರೈತರು ಬೆಳೆದ ಉದ್ದು, ಸೋಯಾ ಅವರೆ, ತೊಗರಿ ಸೇರಿ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನೂ ಮಹಾರಾಷ್ಟ್ರದ ಧನೇಗಾಂವ ಜಲಾಶಯದಿಂದ ಹೆಚ್ಚುವರಿ ನೀರು ಹರಿಬಿಟ್ಟಿರುವ ಪರಿಣಾಮ ನದಿ ದಡದಲ್ಲಿ ಸಾವಿರಾರೂ ಎಕರೆಯಲ್ಲಿ ರೈತರು ಬೆಳೆದ ಎಲ್ಲ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡು ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ರೈತರು ಹಾಗೂ ಈ ಭಾಗಕ್ಕೆ ಹೆಚ್ಚು ಪರಿಹಾರ ಒದಗಿಸಿ ಕೊಡಬೇಕು ಎನ್ನುವ ಉದ್ದೇಶದೊಂದಿಗೆ ಸರ್ಕಾರದ ಮಟ್ಟದಲ್ಲಿ ನಿರಂತರ ಹೋರಾಟ ನಡೆಸಿ ತಾಲ್ಲೂಕನ್ನು ಪ್ರವಾಹ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿಸಿದ್ದೇನೆ. ಇದರಿಂದ ಬರುವ ದಿನಗಳಲ್ಲಿ ಈ ಭಾಗದ ಜನರಿಗೆ ಸರ್ಕಾರದಿಂದ ಪರಿಹಾರಸಿಗಲಿದೆ ಎಂದರು.

ಬೆಳೆ ವಿಮೆ ಕಂಪನಿಯವರು ರೈತರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಆದರೂ ಕೂಡ ಬೆಳೆವಿಮೆ ನೋಂದಾಯಿಸಿದ ಎಲ್ಲ ರೈತರು ಬೆಳೆಹಾನಿ ಮಾಹಿತಿ ತಕ್ಷಣ ಕೃಷಿ ಅಧಿಕಾರಿಗಳಿಗೆ ಸಲ್ಲಿಸಿ ನಾನು ಹೆಚ್ಚು ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸರ್ಕಾರ ಈಗ ಪ್ರಕೃತಿ ವಿಕೋಪದಡಿ ರೈತರಿಗೆ ಕೊಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಪ್ರತಿ ಹೆಕ್ಟೇರ್ ಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ಕೊಡಬೇಕು ಮತ್ತು ಜಿಲ್ಲೆಯಲ್ಲಿ ಹಾಳಾದ ರಸ್ತೆ, ಸೇತುವೆ ಸರಿಪಡಿಸಲು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಿಎಂಗೆ ಒತ್ತಾಯ ಮಾಡಿದರು.

ತಾ.ಪಂ ಮಾಜಿ ಅಧ್ಯಕ್ಷ ಶಿವಕುಮಾರ ದೇಶಮುಖ, ಶಶಿಧರ ಕೋಸಂಬೆ, ರಾಜಕುಮಾರ ಬಿರಾದಾರ, ಟಿಂಕು ರಾಜಭವನ, ವಿಜಯಕುಮಾರ ಪಾಟೀಲ, ರಾಜಕುಮಾರ ನಾಯಕೋಡೆ, ರಾಜಕುಮಾರ ಪಾಟೀಲ ಚಂದಾಪೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.