ADVERTISEMENT

ಬೀದರ್‌: ಜೂನ್ 29ರಂದು ಅದ್ದೂರಿ ಜಗನ್ನಾಥ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 14:09 IST
Last Updated 26 ಜೂನ್ 2025, 14:09 IST
ರಾಮಕೃಷ್ಣನ್‌ ಸಾಳೆ
ರಾಮಕೃಷ್ಣನ್‌ ಸಾಳೆ   

ಬೀದರ್‌: ‘ಜೂ.29ರಂದು ಬೆಳಿಗ್ಗೆ 11.30ಕ್ಕೆ ನಗರದಲ್ಲಿ ಜಗನ್ನಾಥ ರಥಯಾತ್ರೆ ಅದ್ದೂರಿಯಾಗಿ ನಡೆಯಲಿದೆ’ ಎಂದು ರಥಯಾತ್ರೆ ಉತ್ಸವ ಸಮಿತಿ ಗೌರವ ಅಧ್ಯಕ್ಷ ರಾಮಕೃಷ್ಣನ್‌ ಸಾಳೆ ತಿಳಿಸಿದರು.

ಒಡಿಶಾ ರಾಜ್ಯದ ಪುರಿ ನಗರದಲ್ಲಿ ವಿಷ್ಣುವಿನ ಅವತಾರ ಮತ್ತು ಶ್ರೀ ಕೃಷ್ಣನಿಗೆ ಸಮರ್ಪಿತವಾದ ಜಗನ್ನಾಥ ಮಂದಿರ ಇದೆ. ಅಲ್ಲಿಗೆ ಇಡೀ ದೇಶದ ಜನರು ಹೋಗುತ್ತಾರೆ. ಜಿಲ್ಲೆಯ ಭಕ್ತರ ಅನುಕೂಲಕ್ಕಾಗಿ ನಗರದಲ್ಲಿ ಜಗನ್ನಾಥ ಮಂದಿರ ಸ್ಥಾಪಿಸಿದ್ದು, ಪ್ರತಿ ವರ್ಷ ರಥಯಾತ್ರೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ರಥಯಾತ್ರೆಯಲ್ಲಿ ಬಲರಾಮ, ಸುಭದ್ರೆ ಮತ್ತು ಕೃಷ್ಣನ ಮೂರ್ತಿಗಳ ಶೋಭಾಯಾತ್ರೆ ಜರುಗಲಿದೆ. ರಥಯಾತ್ರೆ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಭಗವಂತನ ಪುಷ್ಪವೃಷ್ಟಿ, ಆರತಿ, ಕಾಯಿ ಕರ್ಪೂರ, ನೈವೇದ್ಯ ಸಮರ್ಪಿಸಲಾಗುತ್ತದೆ. ಭಕ್ತರಿಗೆ ನೀರು, ಪಾನಕ, ಲಘು ಉಪಾಹಾರ, ಹಣ್ಣುಗಳನ್ನು ವಿತರಿಸಲಾಗುತ್ತದೆ ಎಂದರು.

ADVERTISEMENT

ರಾಂಪೂರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಿಂದ ರಥಯಾತ್ರೆ ಪ್ರಾರಂಭವಾಗಲಿದೆ. ಪೂಜೆಯೊಂದಿಗೆ ಚಾಲನೆ ನೀಡಲಾಗುವುದು. ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ. ಉತ್ತರ ಪ್ರದೇಶದ ಇಸ್ಕಾನ್ ವೃಂದಾವನದ ಭಕ್ತಿ ಕಿಂಕರ ದಾಮೋದರ ಗೋಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಜೆ 6.30ಕ್ಕೆ ಜಗನ್ನಾಥ ಮಂದಿರದಲ್ಲಿ ಸಮಾರೋಪ ಜರುಗಲಿದೆ ಎಂದು ತಿಳಿಸಿದರು.

ರಥಯಾತ್ರೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ವೀರಶೆಟ್ಟಿ ಮಣಗೆ, ಶಿವರಾಮ ಜೋಷಿ, ರಾಜಕುಮಾರ ಅಳ್ಳೆ, ಡಾ.ನಿಲೇಶ ದೇಶಮುಖ, ಸುನೀಲ ಶರ್ಮಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.